ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 10 ರಂದು ಕೇರಳದ ವಯನಾಡ್ ಜಿಲ್ಲೆಗೆ ಭೇಟಿ ನೀಡಲಿದ್ದು, ಅಲ್ಲಿನ ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳನ್ನು ಪರಿಶೀಲಿಸಲಿದ್ದಾರೆ.
ಜುಲೈ 30 ರಂದು ಗುಡ್ಡಗಾಡು ಜಿಲ್ಲೆ ವಯನಾಡ್ ನಲ್ಲಿ ಸಂಭವಿಸಿದ ಭಾರೀ ಭೂಕುಸಿತದ ನಂತರ 200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 130 ಕ್ಕೂ ಹೆಚ್ಚು ಜನ ಕಾಣೆಯಾಗಿದ್ದಾರೆ.
ಭೂಕುಸಿತ ಪೀಡಿತ ಪ್ರದೇಶದ ಪರಿಸ್ಥಿತಿಯನ್ನು ಪರಿಶೀಲಿಸಲು, ಪ್ರಧಾನಿ ಮೋದಿ ಅವರು ಶನಿವಾರ ಬೆಳಿಗ್ಗೆ 11 ಗಂಟೆಗೆ ಕಣ್ಣೂರಿಗೆ ತಲುಪಲಿದ್ದಾರೆ. ಅವರು ವಯನಾಡಿನಲ್ಲಿ ಭೂಕುಸಿತ ಪೀಡಿತ ಪ್ರದೇಶದ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.
ಭೂಕುಸಿತ ಪೀಡಿತ ಪ್ರದೇಶಕ್ಕೆ ಮಧ್ಯಾಹ್ನ 12:15 ರ ಸುಮಾರಿಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ, ಅಲ್ಲಿ ರಕ್ಷಣಾ ಪಡೆಗಳಿಂದ ಸ್ಥಳಾಂತರ ಕಾರ್ಯ, ರಕ್ಷಣಾ ಪ್ರಯತ್ನಗಳ ಬಗ್ಗೆ, ನಡೆಯುತ್ತಿರುವ ಪುನರ್ವಸತಿ ಕಾಮಗಾರಿಗಳ ಪರಿಶೀಲಿಸಿದ್ದಾರೆ.
ಭೂಕುಸಿತದಿಂದ ಸಂತ್ರಸ್ತರಾದವರನ್ನು ಭೇಟಿ ಮಾಡಲು ಮೋದಿ ಪರಿಹಾರ ಶಿಬಿರ ಮತ್ತು ಆಸ್ಪತ್ರೆಗೆ ತೆರಳಲಿದ್ದಾರೆ. ಸಂತ್ರಸ್ತರು, ಗಾಯಾಳುಗಳ ಅಹವಾಲು ಆಲಿಸಲಿದ್ದಾರೆ. ನಂತರ, ಪ್ರಧಾನಿ ಮೋದಿ ಅವರು ಪರಿಶೀಲನಾ ಸಭೆ ನಡೆಸಲಿದ್ದಾರೆ.