ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಅಯೋಧ್ಯೆಗೆ ಭೇಟಿ ನೀಡಲಿದ್ದು, ನೂತನ ಅಯೋಧ್ಯೆ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ. ವಿಮಾನ ನಿಲ್ದಾಣದ ಜೊತೆಗೆ ಮೋದಿ ಅವರು ನಗರದ ಪುನರಾಭಿವೃದ್ಧಿ ಮಾಡಿದ ಅಯೋಧ್ಯೆ ಧಾಮ್ ರೈಲ್ವೆ ನಿಲ್ದಾಣವನ್ನು ಉದ್ಘಾಟಿಸಲಿದ್ದು, ಅಲ್ಲಿ ಅವರು ಮೊದಲ ಅಮೃತ್ ಭಾರತ್ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ.
ಪ್ರಧಾನಿ ಕಚೇರಿ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಪ್ರಧಾನಿ ಮೋದಿ ಮೊದಲು ನವೀಕರಿಸಿದ ರೈಲ್ವೆ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿಯವರು ಹೊಸ ವಂದೇ ಭಾರತ್ ರೈಲುಗಳು ಮತ್ತು ಭಾರತದ ಮೊದಲ ಅಮೃತ್ ಭಾರತ್ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ ಎಂದು ತಿಳಿದು ಬಂದಿದೆ.
ಅಮೃತ್ ಭಾರತ್ ಎಕ್ಸ್ ಪ್ರೆಸ್ ಭಾರತದ ಸೂಪರ್ ಫಾಸ್ಟ್ ಪ್ಯಾಸೆಂಜರ್ ರೈಲುಗಳ ಹೊಸ ವರ್ಗವಾಗಿದೆ. ಅಮೃತ್ ಭಾರತ್ ರೈಲು “ಹವಾನಿಯಂತ್ರಿತವಲ್ಲದ ಬೋಗಿಗಳನ್ನು ಹೊಂದಿರುವ ಎಲ್ಎಚ್ಬಿ ಪುಶ್-ಪುಲ್ ರೈಲು” ಎಂದು ಪಿಎಂಒ ಬಹಿರಂಗಪಡಿಸಿದೆ.
ದರ್ಭಂಗಾ-ಅಯೋಧ್ಯೆ-ಆನಂದ್ ವಿಹಾರ್ ಟರ್ಮಿನಲ್ ಅಮೃತ್ ಭಾರತ್ ಎಕ್ಸ್ಪ್ರೆಸ್ ಮತ್ತು ಮಾಲ್ಡಾ ಟೌನ್-ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಸ್ (ಬೆಂಗಳೂರು) ಅಮೃತ್ ಭಾರತ್ ಎಕ್ಸ್ಪ್ರೆಸ್ ಎಂಬ ಎರಡು ಹೊಸ ಅಮೃತ್ ಭಾರತ್ ರೈಲುಗಳಿಗೆ ಪ್ರಧಾನಿ ಮೋದಿ ಹಸಿರು ನಿಶಾನೆ ತೋರಲಿದ್ದಾರೆ.
ಅಯೋಧ್ಯೆ ವಿಮಾನ ನಿಲ್ದಾಣ ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅಯೋಧ್ಯೆ ಧಾಮ್ ರೈಲ್ವೆ ನಿಲ್ದಾಣವನ್ನು ಉದ್ಘಾಟಿಸಿದ ನಂತರ, ಪಿಎಂ ಮೋದಿ ಹೊಸ ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಹಸಿರು ನಿಶಾನೆ ತೋರಲಿದ್ದಾರೆ. ಹೊಸದಾಗಿ ನಿರ್ಮಿಸಲಾದ ಅಯೋಧ್ಯೆ ವಿಮಾನ ನಿಲ್ದಾಣವನ್ನು 1,450 ಕೋಟಿ ರೂ.ಗಿಂತ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ವಿಮಾನ ನಿಲ್ದಾಣದ ಟರ್ಮಿನಲ್ ಪ್ರತಿವರ್ಷ ಸುಮಾರು 10 ಲಕ್ಷ ಪ್ರಯಾಣಿಕರಿಗೆ ಸೇವೆ ಸಲ್ಲಿಸಲು ಸಜ್ಜುಗೊಳಿಸಲಾಗಿದೆ.