ಈ ಬಾರಿಯ ಲೋಕಸಭಾ ಚುನಾವಣೆ ಏಳು ಹಂತಗಳಲ್ಲಿ ನಡೆಯುತ್ತಿದ್ದು, ಈಗಾಗಲೇ ಆರು ಹಂತದ ಮತದಾನ ಪೂರ್ಣಗೊಂಡಿದೆ. ಜೂನ್ 1 ರಂದು ಅಂತಿಮ ಹಂತದ ಮತದಾನ ನಡೆಯಲಿದ್ದು, ಅದಕ್ಕೂ ಮುನ್ನಾ ದಿನ ಅಂದರೆ ಮೇ 31 ರಂದು ಪ್ರಧಾನಿ ನರೇಂದ್ರ ಮೋದಿಯವರು ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ಶಿಲಾ ಸ್ಮಾರಕದಲ್ಲಿ ಧ್ಯಾನ ಮಾಡಲಿದ್ದಾರೆ.
ಮೇ 30 ರಂದು ಕನ್ಯಾಕುಮಾರಿಗೆ ಭೇಟಿ ನೀಡಲಿರುವ ನರೇಂದ್ರ ಮೋದಿಯವರು ಮೇ 31ರಂದು ಸ್ವಾಮಿ ವಿವೇಕಾನಂದ ಅವರು ಧ್ಯಾನ ಕೈಗೊಂಡಿದ್ದ ಸ್ಥಳ ‘ಧ್ಯಾನ ಮಂಟಪಂ’ ನಲ್ಲಿಯೇ ಧ್ಯಾನ ಕೈಗೊಳ್ಳುತ್ತಿರುವುದು ವಿಶೇಷ. ಮೋದಿಯವರು ಕನ್ಯಾಕುಮಾರಿಯಲ್ಲಿ 2 ರಿಂದ 3 ದಿನಗಳ ಕಾಲ ವಾಸ್ತವ್ಯ ಹೂಡಲಿದ್ದಾರೆ ಎಂದು ಹೇಳಲಾಗಿದೆ.
ಈ ಹಿಂದೆಯೂ ಸಹ ಸಾರ್ವತ್ರಿಕ ಚುನಾವಣೆ ಪೂರ್ಣಗೊಂಡ ಸಂದರ್ಭದಲ್ಲಿ ನರೇಂದ್ರ ಮೋದಿಯವರು ವಿಶೇಷ ಸ್ಥಳಗಳಿಗೆ ಭೇಟಿ ನೀಡಿದ್ದರು. 2014ರ ಸಾರ್ವತ್ರಿಕ ಚುನಾವಣೆ ಪೂರ್ಣಗೊಂಡ ನಂತರ ಅವರು ಛತ್ರಪತಿ ಶಿವಾಜಿ ಮಹಾರಾಜ್ ಅವರು ಅಫ್ಜಲ್ ಖಾನ್ ವಿರುದ್ಧದ ಕಾಳಗದಲ್ಲಿ ಜಯಶಾಲಿಯಾಗಿದ್ದ ಸ್ಥಳ ಪ್ರತಾಪಗಢಕ್ಕೆ ಭೇಟಿ ನೀಡಿದ್ದರು. ಅದೇ ರೀತಿ 2019ರ ಲೋಕಸಭಾ ಚುನಾವಣೆ ಪೂರ್ಣಗೊಂಡ ನಂತರ ಕೇದಾರನಾಥಕ್ಕೆ ಭೇಟಿ ನೀಡಿದ್ದ ನರೇಂದ್ರ ಮೋದಿಯವರು ರುದ್ರ ಗುಹೆಯಲ್ಲಿ ಧ್ಯಾನ ನಡೆಸಿದ್ದರು.