ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಾರಣಾಸಿಗೆ ಭೇಟಿ ನೀಡಲಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ವಾರಣಾಸಿಯ ಈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವನ್ನು 30 ಎಕರೆ ಪ್ರದೇಶದಲ್ಲಿ ಸುಮಾರು 450 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಕ್ರೀಡಾಂಗಣವನ್ನು ಅರ್ಧಚಂದ್ರಾಕಾರದ ಛಾವಣಿ, ತ್ರಿಶೂಲ್ ಆಕಾರದ ಫ್ಲಡ್ ಲೈಟ್ ಗಳು ಮತ್ತು ಘಾಟ್ ಮೆಟ್ಟಿಲು ಆಧಾರಿತ ಆಸನ ವ್ಯವಸ್ಥೆಯೊಂದಿಗೆ ವಿನ್ಯಾಸಗೊಳಿಸಲಾಗುವುದು. ಈ ಕ್ರೀಡಾಂಗಣವು 30,000 ಪ್ರೇಕ್ಷಕರ ಆಸನ ಸಾಮರ್ಥ್ಯವನ್ನು ಹೊಂದಿರುತ್ತದೆ.
ಬಾರ್ ಕೌನ್ಸಿಲ್ ಆಫ್ ಇಂಡಿಯಾ ಸೆಪ್ಟೆಂಬರ್ 23 ಮತ್ತು 24 ರಂದು ‘ನ್ಯಾಯ ವಿತರಣಾ ವ್ಯವಸ್ಥೆಯಲ್ಲಿ ಉದಯೋನ್ಮುಖ ಸವಾಲುಗಳು’ ಕುರಿತು ಅಂತರರಾಷ್ಟ್ರೀಯ ವಕೀಲರ ಸಮ್ಮೇಳನವನ್ನು ಆಯೋಜಿಸಿದೆ, ಇದನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ವಾರಣಾಸಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ ನೆರವೇರಿಸುವುದರ ಜೊತೆಗೆ, ಉತ್ತರ ಪ್ರದೇಶದಾದ್ಯಂತ ಸುಮಾರು 1,115 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ 16 ಅಟಲ್ ವಸತಿ ಶಾಲೆಗಳನ್ನು ಮೋದಿ ಉದ್ಘಾಟಿಸಲಿದ್ದಾರೆ.
ತಮ್ಮ ಒಂದು ದಿನದ ಭೇಟಿಯಲ್ಲಿ, ಪಿಎಂ ಮೋದಿ ಅವರು ಕಾಶಿ ಸಂಸದ್ ಸಾಂಸ್ಕೃತಿಕ ಉತ್ಸವ 2023 ರ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.