ನವದೆಹಲಿ: ದೇಶದ ಪ್ರತಿಯೊಬ್ಬ ನಾಗರೀಕರಿಗೂ ಅವರ ಆರೋಗ್ಯದ ಕುರಿತ ಡಿಜಿಟಲ್ ಕಾರ್ಡ್ ವಿತರಿಸುವ ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಲಿದ್ದಾರೆ.
ದೇಶಾದ್ಯಂತ ಯೋಜನೆ ಜಾರಿಗೆ ಪ್ರಧಾನಿ ಮೋದಿ ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ. ಈಗಾಗಲೇ ಪ್ರಾಯೋಗಿಕ ಹಂತದಲ್ಲಿ 6 ಕೇಂದ್ರಾಡಳಿತ ಪ್ರದೇಶಗಳಲ್ಲಿ ಯೋಜನೆ ಜಾರಿಯಲ್ಲಿದ್ದು, ದೇಶಾದ್ಯಂತ ವಿಸ್ತರಿಸಲಾಗುವುದು.
ದೇಶದ ಎಲ್ಲಾ ನಾಗರಿಕರಿಗೆ ಅವರ ಆರೋಗ್ಯದ ಮಾಹಿತಿ ಹೊಂದಿರುವ ಡಿಜಿಟಲ್ ಕಾರ್ಡ್ ವಿತರಿಸಲಾಗುವುದು. ಜನಧನ್ ಖಾತೆ ಸಂಖ್ಯೆ, ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ ರೀತಿ ಡಿಜಿಟಲ್ ಕಾರ್ಡ್ ಸಹ ವಿಶೇಷ ಸಂಖ್ಯೆಯನ್ನು ಹೊಂದಿರುತ್ತದೆ.
ಇದರಲ್ಲಿ ವ್ಯಕ್ತಿಯ ಆರೋಗ್ಯ ಕುರಿತ ಮಾಹಿತಿ ಇರಲಿದೆ. ಮೊಬೈಲ್ ಆಪ್ ಕೂಡ ಅಭಿವೃದ್ಧಿಪಡಿಸಲಾಗಿದ್ದು, ಆರೋಗ್ಯ ಕಾರ್ಡ್ ನೊಂದಿಗೆ ಹೆಲ್ತ್ ಕೇರ್ ಪ್ರೊಫೆಷನಲ್ಸ್ ರಿಜಿಸ್ಟ್ರಿ ಹಾಗೂ ಹೆಲ್ತ್ ಕೇರ್ ಫೆಸಿಲಿಟೀಸ್ ರಿಜಿಸ್ಟ್ರೀಸ್ ವಿಭಾಗಗಳಿವೆ. ರೋಗಿಗಳು ವೈದ್ಯರ ಬಳಿಗೆ ಹೋಗುವಾಗ ಚಿಕಿತ್ಸೆ ಪಡೆದ ದಾಖಲೆ ಕೊಂಡೊಯ್ಯಬೇಕಿಲ್ಲ. ಕಾರ್ಡ್ ನಲ್ಲಿಯೇ ಅವರ ಚಿಕಿತ್ಸೆ, ಆರೋಗ್ಯದ ಕುರಿತಾದ ಮಾಹಿತಿ ಇರಲಿದೆ.