ಶಿವಮೊಗ್ಗಕ್ಕೆ ಸಕಲ ಸೌಲಭ್ಯಗಳನ್ನು ಒಳಗೊಂಡಿರುವ ವಿಮಾನ ನಿಲ್ದಾಣ ತರಬೇಕೆಂಬ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಬಹುಕಾಲದ ಕನಸು ಇಂದು ನನಸಾಗುತ್ತಿದೆ. ಅವರ 80ನೇ ವರ್ಷದ ಹುಟ್ಟುಹಬ್ಬದಂದೇ ಈ ವಿಮಾನ ನಿಲ್ದಾಣ ಲೋಕಾರ್ಪಣೆಗೊಳ್ಳುತ್ತಿರುವುದು ವಿಶೇಷವಾಗಿದ್ದು, ಇಂದು ಬೆಳಿಗ್ಗೆ 11:30ಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಇದರ ಉದ್ಘಾಟನೆ ನೆರವೇರಿಸಲಿದ್ದಾರೆ.
ಒಟ್ಟು 775 ಎಕರೆ ವಿಸ್ತೀರ್ಣ ಹೊಂದಿರುವ ಈ ವಿಮಾನ ನಿಲ್ದಾಣ ನಿರ್ಮಾಣಕ್ಕೆ 449.22 ಕೋಟಿ ರೂಪಾಯಿ ವೆಚ್ಚವಾಗಿದ್ದು, ಮೂಲಸೌಕರ್ಯ ಸೇರಿ ಇತರೆ ಸೌಲಭ್ಯಕ್ಕಾಗಿ ಒಟ್ಟಾರೆ 600 ಕೋಟಿ ರೂಪಾಯಿಗಳನ್ನು ವ್ಯಯಿಸಲಾಗಿದೆ. ಇದು 4320 ಚದರಡಿ ವಿಸ್ತೀರ್ಣದ ಪ್ಯಾಸೆಂಜರ್ ಟರ್ಮಿನಲ್ ಅನ್ನು ಹೊಂದಿದೆ. ಇನ್ನು ಇದರ ವಿನ್ಯಾಸವೂ ವಿಶೇಷವಾಗಿದ್ದು, ಏರಿಯಲ್ ವ್ಯೂ ನಲ್ಲಿ ಕಮಲಾಕೃತಿಯಂತೆ ಕಾಣುತ್ತದೆ.
ರಾಜ್ಯದ 8ನೇ ವಿಮಾನ ನಿಲ್ದಾಣ ಇದಾಗಿದ್ದು, ಜೊತೆಗೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದ ಬಳಿಕ ಅತಿ ಉದ್ದದ ಅಂದರೆ 3200 ಮೀಟರ್ ರನ್ ವೇ ಹೊಂದಿರುವ ಕರ್ನಾಟಕದ ಎರಡನೇ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆ ಇದಕ್ಕಿದೆ. ಈಗಾಗಲೇ ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾಂ, ಕಲಬುರಗಿ, ಬಳ್ಳಾರಿಯಲ್ಲಿ ವಿಮಾನ ನಿಲ್ದಾಣಗಳು ಕಾರ್ಯನಿರ್ವಹಿಸುತ್ತಿದ್ದು ಇದಕ್ಕೆ ಈಗ ಶಿವಮೊಗ್ಗ ವಿಮಾನ ನಿಲ್ದಾಣ ಸೇರ್ಪಡೆಯಾಗಿದೆ.