ನವದೆಹಲಿ : ಜನವರಿ 12 ರ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಅಟಲ್ ಬಿಹಾರಿ ವಾಜಪೇಯಿ ಸೇವಾರಿ – ನವಾ ಶೇವಾ ಅಟಲ್ ಸೇತುವನ್ನು ಉದ್ಘಾಟಿಸಲು ಮಹಾರಾಷ್ಟ್ರಕ್ಕೆ ಭೇಟಿ ನೀಡಲಿದ್ದಾರೆ.
27ನೇ ರಾಷ್ಟ್ರೀಯ ಯುವ ಉತ್ಸವವನ್ನು ಉದ್ಘಾಟಿಸಲು ಅವರು ಮಧ್ಯಾಹ್ನ 12:15 ರ ಸುಮಾರಿಗೆ ನಾಸಿಕ್ ಗೆ ಆಗಮಿಸಲಿದ್ದಾರೆ. ನಂತರ, ಮಧ್ಯಾಹ್ನ 3:30 ಕ್ಕೆ ಮುಂಬೈನಲ್ಲಿ ಅವರು ಅಟಲ್ ಬಿಹಾರಿ ವಾಜಪೇಯಿ ಸೇವಾರಿ – ನವಾ ಶೇವಾ ಅಟಲ್ ಸೇತುವನ್ನು ಉದ್ಘಾಟಿಸಲಿದ್ದಾರೆ.
ಈ ಹಿಂದೆ ಮುಂಬೈ ಟ್ರಾನ್ಸ್ಹಾರ್ಬರ್ ಲಿಂಕ್ (ಎಂಟಿಎಚ್ಎಲ್) ಎಂದು ಕರೆಯಲ್ಪಡುತ್ತಿದ್ದ ಅಟಲ್ ಬಿಹಾರಿ ವಾಜಪೇಯಿ ಸೇವಾರಿ – ನವಾ ಶೇವಾ ಅಟಲ್ ಸೇತು ನಿರ್ಮಾಣವು ಚಲನಶೀಲತೆಯನ್ನು ಸುಧಾರಿಸುವ ಸರ್ಕಾರದ ದೃಷ್ಟಿಕೋನಕ್ಕೆ ಅನುಗುಣವಾಗಿದೆ. ಪ್ರಧಾನಮಂತ್ರಿಯವರು 2016ರ ಡಿಸೆಂಬರ್ ನಲ್ಲಿ ಈ ಸೇತುವೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಅಟಲ್ ಸೇತುವನ್ನು ಒಟ್ಟು 17,840 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ.
ಇದು ಸುಮಾರು 21.8 ಕಿ.ಮೀ ಉದ್ದದ 6 ಪಥದ ಸೇತುವೆಯಾಗಿದ್ದು, ಸಮುದ್ರದ ಮೇಲೆ ಸುಮಾರು 16.5 ಕಿ.ಮೀ ಉದ್ದ ಮತ್ತು ಭೂಮಿಯಲ್ಲಿ ಸುಮಾರು 5.5 ಕಿ.ಮೀ ಉದ್ದವಿದೆ. ಇದು ಭಾರತದ ಅತಿ ಉದ್ದದ ಸೇತುವೆ ಸಮುದ್ರ ಸೇತುವೆಯಾಗಿದೆ.
ಈ ಸೇತುವೆಯು ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ನವೀ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವೇಗದ ಸಂಪರ್ಕವನ್ನು ಒದಗಿಸುತ್ತದೆ, ಮುಂಬೈನಿಂದ ಪುಣೆ, ಗೋವಾ ಮತ್ತು ದಕ್ಷಿಣ ಭಾರತಕ್ಕೆ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ.