ನೂತನ ಸಂಸತ್ ಭವನ ನಿರ್ಮಿಸಲು ಶ್ರಮಿಸಿದ 60,000 ಕಾರ್ಮಿಕರನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಇದೇ ಮೇ 28ರಂದು ಭವನ ಉದ್ಘಾಟನೆ ಸಂದರ್ಭದಲ್ಲಿ ಸನ್ಮಾನಿಸಲಿದ್ದಾರೆ.
“ಈ ಸಂಸತ್ ಭವನದ ನಿರ್ಮಾಣವನ್ನು ನಿಗದಿತ ಕಾಲಮಿತಿಯಲ್ಲಿ ಮಾಡಿ ಮುಗಿಸಲು 60,000 ದಷ್ಟು ಕಾರ್ಮಿಕರು ನಿರಂತರ ಶ್ರಮ ಹಾಕಿದ್ದಾರೆ. ಈ ಯೋಜನೆಯು ಪ್ರಧಾನ ಮಂತ್ರಿ ಅವರ ದೂರದೃಷ್ಟಿಯ ಸೂಚಕವಾಗಿದೆ. ಮೇ 28ರಂದು ಸಂಸತ್ ಭವನವನ್ನು ಪ್ರಧಾನಿ ದೇಶಕ್ಕೆ ಅರ್ಪಿಸಲಿದ್ದು, ಈ ಘಳಿಗೆಯು ಭಾರತದಲ್ಲಿ ಅಮೃತ ಕಾಲವನ್ನು ಸೂಚಿಸಲಿದೆ,” ಎಂದು ಗೃಹ ಮಂತ್ರಿ ಅಮಿತ್ ಶಾ ತಿಳಿಸಿದ್ದಾರೆ.
ನೂತನ ಸಂಸತ್ ಭವನದಲ್ಲಿ 888 ಸದಸ್ಯರಿಗೆ ಸ್ಥಳಾವಕಾಶವಿದ್ದು, ರಾಜ್ಯ ಸಭೆಯಲ್ಲಿ 383 ಸದಸ್ಯರು ಕೂರಬಹುದಾಗಿದೆ. 2026ಕ್ಕೆ ಜನಸಂಖ್ಯಾವಾರು ಕ್ಷೇತ್ರ ಮರುವಿಂಗಡಣೆಯಾಗುವ ನಿರೀಕ್ಷೆ ಇರುವ ಕಾರಣ, ಆ ವೇಳೆಗೆ ಪ್ರಸಕ್ತ 543 ಸದಸ್ಯ ಬಲವಿರುವ ಲೋಕ ಸಭೆ ಹಾಗೂ 250 ಸದಸ್ಯ ಬಲದ ರಾಜ್ಯ ಸಭೆಗಳ ಸದಸ್ಯಬಲಗಳು ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.
ಇದೇ ವೇಳೆ, ದೇಶವನ್ನಾಳುವ ದೊರೆ ಅಥವಾ ಮಂತ್ರಿಗಳಿಗೆ ಸದಾಚಾರದ ನಡತೆಯನ್ನು ಪ್ರಮಾಣೀಕರಿಸುವ ’ಸೆಂಗೊಲ್’ ಅನ್ನು ನೂತನ ಸಂಸತ್ ಭವನದಲ್ಲಿ ಸ್ಪೀಕರ್ ಕೂರುವ ಜಾಗದಲ್ಲಿ ಇರಿಸಲಾಗುವುದು ಎಂದು ಅಮಿತ್ ಶಾ ತಿಳಿಸಿದ್ದಾರೆ.
ಚೋಳರ ಕಾಲದಲ್ಲಿ ದೊರೆಗಳು ರಾಜ್ಯದ ಹಿತಕ್ಕಾಗಿ, ಪ್ರಜೆಗಳಿಗೆ ನ್ಯಾಯಯುತವಾದ ಹಾಗೂ ನಿಷ್ಪಕ್ಷಪಾತವಾದ ಆಡಳಿತ ನೀಡುವುದಾಗಿ ಪ್ರಮಾಣ ವಚನ ಬೋಧನೆ ಮಾಡಿಸುವ ವೇಳೆ ಉನ್ನತ ಮಟ್ಟದ ಅರ್ಚಕರು ಸೆಂಗೊಲ್ ಅನ್ನು ನೀಡುತ್ತಿದ್ದರು ಎಂದು ಹೇಳಲಾಗುತ್ತದೆ.
ಆಗಸ್ಟ್ 14, 1947ರಲ್ಲಿ ಬ್ರಿಟೀಷರಿಂದ ಭಾರತದ ಆಡಳಿತವು ಭಾರತೀಯರಿಗೆ ಹಸ್ತಾಂತರಗೊಂಡ ವೇಳೆ ಅಂದಿನ ವೈಸ್‌ರಾಯ್ ಲಾರ್ಡ್ ಮೌಂಟ್‌ಬ್ಯಾಟನ್ ಅವರು ದೇಶದ ಮೊದಲ ಪ್ರಧಾನಿ ಜವಾಹರ ಲಾಲ್ ನೆಹರೂಗೆ ಇದೇ ಸೆಂಗೊಲ್ ಅನ್ನು ವರ್ಗಾಯಿಸಿದ್ದರು ಎಂಬ ವಿಚಾರ ಇದೀಗ ಹೊರ ಬಂದಿದೆ.
ಸ್ವತಂತ್ರ ಭಾರತದ ಮೊಟ್ಟ ಮೊದಲ ಹಾಗೂ ಕೊನೆಯ ಗವರ್ನರ್ ಜನರಲ್ ಆಗಿದ್ದ ಸಿ ರಾಜಗೋಪಾಲಾಚಾರಿ ಅವರ ಸಲಹೆ ಮೇರೆಗೆ, ತಮಿಳು ನಾಡಿನ ತಿರುವಾಡುದುರೈ ಅಧೀನಂ ಮಠದ ಮುಖ್ಯಸ್ಥರ ನೇತೃತ್ವದಲ್ಲಿ, ಅಂದಿನ ಮದ್ರಾಸಿನ ಆಭರಣ ವಿನ್ಯಾಸಕ ವುಮ್ಮಿಡಿ ಬಂಗಾರು ಚೆಟ್ಟಿ ಅವರ ಕೈಯಲ್ಲಿ ಐದು ಅಡಿ ಉದ್ದದ ಈ ಸೆಂಗೊಲ್ ಅನ್ನು ರಚಿಸಲಾಗಿತ್ತು. ಸೆಂಗೊಲ್‌ನ ಮೇಲೆ ನಂದಿಯ ಮೂರ್ತಿ ಇದ್ದು, ಇದು ನ್ಯಾಯಪರತೆಯನ್ನು ಸಾರುತ್ತದೆ.
ಇಂತಿಪ್ಪ ಸೆಂಗೊಲ್ ಅನ್ನು, ಭಾರತದ ಅಧಿಕಾರ ಹಸ್ತಾಂತರದದ ಸಂದರ್ಭದಲ್ಲಿ ಮೊದಲಿಗೆ ಮೌಂಟ್ ಬ್ಯಾಟನ್ ಕೈಗಿತ್ತ ಮಠಾಧೀಶರು, ಕೂಡಲೇ ಅದನ್ನು ಅವರಿಂದ ಹಿಂಪಡೆದು, ಸೆಂಗೊಲ್ ಮೇಲೆ ಗಂಗಾಜಲದ ಪ್ರೋಕ್ಷಣೆ ಮಾಡಿ, ಮೆರವಣಿಗೆ ಮುಖಾಂತರ ಮೊದಲ ಪ್ರಧಾನಿ ನೆಹರೂಗೆ ಹಸ್ತಾಂತರ ಮಾಡಿದ್ದರು. 1947ರ ಆಗಸ್ಟ್ 14-15ರ ಮಧ್ಯರಾತ್ರಿಗೆ 15 ನಿಮಿಷ ಇರುವಾಗ ಹೀಗೆ ಹಸ್ತಾಂತರಗೊಂಡ ಈ ಸೆಂಗೊಲ್ ಇದೀಗ ಪ್ರಯಾಗ್‌ರಾಜ್‌ನ ಸಂಗ್ರಹಾಲಯದಲ್ಲಿದೆ. ಭಾರತ ಗಣರಾಜ್ಯದ ಉಗಮದ ಹಿಂದಿನ ಪ್ರಮುಖ ಘಟನೆಗಳಿಗೆ ನಾಂದಿ ಹಾಡಿದ ’ಸೆಂಗೊಲ್’ಅನ್ನು ದೇಶದ ಅಧಿಕಾರ ಶಕ್ತಿಕೇಂದ್ರವಾದ ಸಂಸತ್ತಿನಲ್ಲಿಡುವುದೇ ಸೂಕ್ತವೆಂದು ಗೃಹ ಸಚಿವರು ಅಭಿಪ್ರಾಯ ಪಟ್ಟಿದ್ದಾರೆ.