ಬುಧವಾರದಂದು ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದ್ದು, ಇಡೀ ಜಗತ್ತು ಬೆರಗಿನ ಕಣ್ಣಿನಿಂದ ಭಾರತದತ್ತ ನೋಡುತ್ತಿದೆ. ಚಂದ್ರನ ಅಂಗಳದಲ್ಲಿ ಬಾಹ್ಯಾಕಾಶ ನೌಕೆಯನ್ನು ಇಸ್ರೋ ವಿಜ್ಞಾನಿಗಳು ಯಶಸ್ವಿಯಾಗಿ ಲ್ಯಾಂಡ್ ಮಾಡಿದ್ದು, ಅದರಲ್ಲೂ ಚಂದಿರನ ದಕ್ಷಿಣ ಧ್ರುವಕ್ಕೆ ಕಾಲಿಟ್ಟ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.
ಈ ಹಿನ್ನೆಲೆ ‘ಇಸ್ರೋ’ ವಿಜ್ಞಾನಿಗಳನ್ನು ಅಭಿನಂದಿಸಲು ಇಂದು ಬೆಂಗಳೂರಿಗೆ ಪ್ರಧಾನಿ ಮೋದಿ ಆಗಮಿಸುತ್ತಿದ್ದಾರೆ. ಆಗಸ್ಟ್ 26ರಂದು ಇಂದು ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿನಲ್ಲಿ ಇಸ್ರೋ ವಿಜ್ಞಾನಿಗಳನ್ನು ಖುದ್ದು ಭೇಟಿಯಾಗಿ ಅಭಿನಂದಿಸಲಿದ್ದಾರೆ ಎಂದು ತಿಳಿದು ಬಂದಿದೆ. ಬೆಂಗಳೂರಿನಲ್ಲಿ ನಿಗದಿಯಾಗಿದ್ದ ರೋಡ್ ಶೋ ರದ್ದಾಗಿದೆ. ಹೌದು, ಬಿಜೆಪಿ ಪ್ರಧಾನಿ ಮೋದಿ ರೋಡ್ ಶೋ ನಡೆಸಲು ನಿರ್ಧರಿಸಿತ್ತು, ಆದರೆ ಕೊನೇ ಕ್ಷಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ ರದ್ದಾಗಿದೆ.
ಅದೇ ರೀತಿ ಎಲ್ಲಿಯೂ ಕೂಡ ಬಿಜೆಪಿ ಬಾವುಟ ಕಟ್ಟುವ ಹಾಗಿಲ್ಲ. ಬರೀ ತ್ರಿವಣ ಧ್ವಜ ಮಾತ್ರ ಹಾರಾಡಬೇಕು ಎಂದು ಖಡಕ್ ಆದೇಶ ಹೊರಡಿಸಲಾಗಿದೆ. ಎಲ್ಲಿಯೂ ಸಹ ಬಿಜೆಪಿಯ ಧ್ವಜವನ್ನು ಕಟ್ಟಬಾರದು ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ಆದೇಶ ಹೊರಡಿಸಿದೆ.
ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಕೆಲ ಮಾರ್ಗಗಳನ್ನು ಬದಲಾವಣೆ ಮಾಡಲಾಗುತ್ತಿದೆ. ಸಂಚಾರ ಮಾರ್ಗದಲ್ಲಿ ಕೆಲ ಬದಲಾವಣೆಗಳಾಗಿದ್ದು, ಪರ್ಯಾಯ ಮಾರ್ಗ ಅನುಸರಿಸುವಂತೆ ಸಂಚಾರಿ ಪೊಲೀಸರು ಸೂಚಿಸಿದ್ದಾರೆ.
ಬೆಳಿಗ್ಗೆ 4:30ರಿಂದ ಬೆಳಿಗ್ಗೆ 9:30ರವರೆಗೆ ಸಂಚಾರ ಬದಲಾವಣೆ ಮಾಡಲಾಗಿದೆ. ಹಳೇ ಏರ್ ಪೋರ್ಟ್ ರಸ್ತೆ, ಹಳೇ ಮದ್ರಾಸ್ ರಸ್ತೆ, ಎಂ.ಜಿ.ರಸ್ತೆ, ಕಬ್ಬನ್ ರಸ್ತೆ, ರಾಜಭವನ ರಸ್ತೆ, ಬಳ್ಳಾರಿ ರಸ್ತೆ (ಮೇಖ್ರೀ ಸರ್ಕಲ್) ಸಿ.ವಿ.ರಾಮನ್ ರಸ್ತೆ, ಯಶವಂತಪುರ ಫ್ಲೈ ಓವರ್, ತುಮಕೂರು ರಸ್ತೆ (ಯಶವಂತಪುರದಿಂದ ನಾಗಸಂದ್ರದವರೆಗೆ) ಮಾಗಡಿ ರಸ್ತೆ, ಗೊರಗುಂಟೆ ಪಾಳ್ಯ ಜಂಕ್ಷನ್ ನಿಂದ ಸೋಮನಹಳ್ಳಿ, ಗುಬ್ಬಿ ತೋಟದಪ್ಪ ರಸ್ತೆ, ಜಾಲಹಳ್ಳಿ ಕ್ರಾಸ್ ರಸ್ತೆಗಳಲ್ಲಿ ಸಂಚಾರ ಬದಲಾವಣೆ ಮಾಡಲಾಗಿದೆ.