ನವದೆಹಲಿ: ದೇಶದ ಜನತೆಗೆ ಆರೋಗ್ಯದ ಡಿಜಿಟಲ್ ದಾಖಲೆ ಸೃಷ್ಟಿಸಿಕೊಳ್ಳಲು ಉತ್ತೇಜನ ನೀಡುವ ಯೋಜನೆಗೆ ಕೇಂದ್ರ ಸರ್ಕಾರ ಆರೋಗ್ಯ ಭಾರತ್ ಹೆಲ್ತ್ ಅಕೌಂಟ್ಸ್(ABHA) ಎಂದು ನಾಮಕರಣ ಮಾಡಲು ನಿರ್ಧರಿಸಿದೆ. ಪ್ರಧಾನಿ ನರೇಂದ್ರ ಮೋದಿ ಗಣರಾಜ್ಯೋತ್ಸವದ ದಿನ ಇದರ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಜನಸಾಮಾನ್ಯರಿಗೆ ಉಚ್ಛರಿಸಲು ಅನುಕೂಲವಾಗುವಂತೆ ABHA ಎಂದು ನಾಮಕರಣ ಮಾಡಲಾಗುವುದು. 2020ರ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಭಾಷಣದ ಸಂದರ್ಭದಲ್ಲಿ ಪ್ರಧಾನಿ ಮೋದಿ ಯೋಜನೆಯ ಘೋಷಣೆ ಮಾಡಿದ್ದರು. ಅದೇ ವರ್ಷದ ಸೆಪ್ಟಂಬರ್ ನಲ್ಲಿ ಯೋಜನೆ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿತ್ತು.
ಜನವರಿ 6 ರ ವರೆಗೆ ದೇಶದಲ್ಲಿ 15 ಕೋಟಿ ಹೆಲ್ತ್ ಐಡಿಗಳನ್ನು ಸೃಷ್ಟಿಸಲಾಗಿದೆ. 15,000 ಆರೋಗ್ಯ ಸೇವಾ ಸಂಸ್ಥೆಗಳು, 7400 ವೈದ್ಯರು ನೋಂದಾಯಿಸಿಕೊಂಡಿದ್ದಾರೆ. ಆರೋಗ್ಯ ಭಾರತ್ ಹೆಲ್ತ್ ಅಕೌಂಟ್ಸ್ 14 ಅಂಕಿಗಳನ್ನು ಒಳಗೊಂಡ ವಿಶಿಷ್ಟ ಸಂಖ್ಯೆಯಾಗಿದೆ. ಇದರಲ್ಲಿ ವ್ಯಕ್ತಿಯ ಸಂಪೂರ್ಣ ಆರೋಗ್ಯದ ಮಾಹಿತಿ ಇರಲಿದ್ದು, ವೈದ್ಯರು ತ್ವರಿತವಾಗಿ ಆರೋಗ್ಯದ ಹಿನ್ನೆಲೆ ಅರಿತು ಚಿಕಿತ್ಸೆ ನೀಡಲು ಸಹಕಾರಿಯಾಗುತ್ತದೆ. ಅಲ್ಲದೆ ಸರ್ಕಾರದಿಂದ ದೇಶದ ಜನತೆಗೆ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸಲು ಅನುಕೂಲವಾಗುತ್ತದೆ ಎಂದು ಹೇಳಲಾಗಿದೆ.