ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಸ್ವಕ್ಷೇತ್ರ ವಾರಣಾಸಿಗೆ ಮೊದಲ ಭೇಟಿ ನೀಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಮತ್ತೆ ಚುನಾಯಿಸಿದ ಜನತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಅವರು ವಾರಣಾಸಿಯಲ್ಲಿ ಪಿಎಂ-ಕಿಸಾನ್ ಯೋಜನೆಯ 17 ನೇ ಕಂತು ಬಿಡುಗಡೆ ಮಾಡಿದರು. 9.26 ಕೋಟಿಗೂ ಹೆಚ್ಚು ರೈತರಿಗೆ 20,000 ಕೋಟಿಗೂ ಅಧಿಕ ಮೊತ್ತ ಬಿಡುಗಡೆ ಮಾಡಿದ್ದಾರೆ.
ಮಾ ಗಂಗಾ ನನ್ನನ್ನು ದತ್ತು ತೆಗೆದುಕೊಂಡಿದ್ದಾಳೆ, ನಾನು ಇಲ್ಲಿನವನಾಗಿದ್ದು, ನಿಮ್ಮ ಕನಸುಗಳು ಮತ್ತು ಆಕಾಂಕ್ಷೆಗಳನ್ನು ಈಡೇರಿಸಲು ನಾನು ಹಗಲಿರುಳು ಶ್ರಮಿಸುತ್ತೇನೆ ಎಂದು ಹೇಳಿದ್ದಾರೆ.
ದೇಶದಲ್ಲಿ ಇತ್ತೀಚೆಗೆ ನಡೆದ ಸಾರ್ವತ್ರಿಕ ಚುನಾವಣೆಗಳನ್ನು ಶ್ಲಾಘಿಸಿದ ಪ್ರಧಾನಿ, 60 ವರ್ಷಗಳಲ್ಲಿ ಮೊದಲ ಬಾರಿಗೆ ಸತತ ಮೂರನೇ ಬಾರಿಗೆ ಸರ್ಕಾರ ಅಧಿಕಾರಕ್ಕೆ ಮರಳಿದೆ. 31 ಕೋಟಿಗೂ ಹೆಚ್ಚು ಮಹಿಳಾ ಮತದಾರರು ಈ ಚುನಾವಣೆಯಲ್ಲಿ ಭಾಗವಹಿಸಿದ್ದಾರೆ. ಇದು ವಿಶ್ವದಲ್ಲೇ ಅತಿ ಹೆಚ್ಚು ಮಹಿಳಾ ಮತದಾರರು. ಈ ಸಂಖ್ಯೆ ಅಮೆರಿಕದ ಇಡೀ ಜನಸಂಖ್ಯೆಗೆ ಹತ್ತಿರವಾಗಿದೆ. ಭಾರತೀಯ ಪ್ರಜಾಪ್ರಭುತ್ವದ ಈ ಶಕ್ತಿ ಇಡೀ ಜಗತ್ತನ್ನು ಆಕರ್ಷಿಸುತ್ತದೆ. ಪ್ರಜಾಪ್ರಭುತ್ವದ ಹಬ್ಬವನ್ನು ಯಶಸ್ವಿಗೊಳಿಸಿದ್ದಕ್ಕಾಗಿ ನಾನು ವಾರಣಾಸಿಯ ಪ್ರತಿಯೊಬ್ಬ ಮತದಾರರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ. 60 ವರ್ಷಗಳ ನಂತರ ಭಾರತದ ಜನರಿಂದ ಸತತವಾಗಿ ಚುನಾಯಿತ ಸರ್ಕಾರವೊಂದು ಬಂದಿರುವುದು ಹೊಸ ಇತಿಹಾಸವನ್ನು ಸೃಷ್ಟಿಸಿದೆ ಎಂದರು.