ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳ ಪರೀಕ್ಷೆ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ವಾರ್ಷಿಕವಾಗಿ ನಡೆಸುವ ಪರೀಕ್ಷಾ ಪೇ ಚರ್ಚಾ ಶುಕ್ರವಾರ ನಡೆಯಲಿದೆ.
38 ಲಕ್ಷ ವಿದ್ಯಾರ್ಥಿಗಳು ಪರೀಕ್ಷಾ ಪೇ ಚರ್ಚಾದಲ್ಲಿ ಭಾಗವಹಿಸಲು ನೋಂದಣಿ ಮಾಡಿಕೊಂಡಿದ್ದಾರೆ. ಪರೀಕ್ಷಾ ಪೇ ಚರ್ಚಾದ ಆರನೇ ಆವೃತ್ತಿ ಇಂದು ನಡೆಯಲಿದ್ದು, ದೆಹಲಿಯ ತಾಲ್ಕತೋರಾ ಒಳಾಂಗಣ ಕ್ರೀಡಾಂಗಣದಲ್ಲಿ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಈ ಬಾರಿ 155 ದೇಶಗಳಿಂದ ನೋಂದಣಿ ಮಾಡಿಕೊಳ್ಳಲಾಗಿದ್ದು, 20 ಲಕ್ಷಕ್ಕೂ ಹೆಚ್ಚು ಪ್ರಶ್ನೆಗಳು ಬಂದಿದ್ದವು. ಕೌಟುಂಬಿಕ ಒತ್ತಡ, ಒತ್ತಡ ನಿರ್ವಹಣೆ, ಆರೋಗ್ಯ, ಸ್ಥಿರತೆ, ವೃತ್ತಿ ಜೀವನಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಎನ್.ಸಿ.ಇ.ಆರ್.ಟಿ. ಅಂತಿಮಗೊಳಿಸಿದೆ. ಪ್ರಧಾನಿಯವರು ವಿದ್ಯಾರ್ಥಿಗಳೊಂದಿಗೆ ಪರೀಕ್ಷೆ ಒತ್ತಡ ನಿವಾರಣೆ ಬಗ್ಗೆ ಚರ್ಚೆ ನಡೆಸಿ ಸಲಹೆ ನೀಡಲಿದ್ದಾರೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಮಾಹಿತಿ ನೀಡಿದ್ದಾರೆ.