ನವದೆಹಲಿ: ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ದೇಶವನ್ನುದ್ದೇಶಿಸಿ ಮತ್ತೊಮ್ಮೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ನಮ್ಮಲ್ಲಿ ಅನೇಕರು ಪರಿವಾರದವರನ್ನು ಕಳೆದುಕೊಂಡಿದ್ದಾರೆ. ಮೃತರ ಕುಟುಂಬಕ್ಕೆ ಸಂತಾಪ ಸೂಚಿಸುತ್ತೇನೆ ಎಂದು ಹೇಳಿದ್ದಾರೆ.
ಕೊರೋನಾದಂತಹ ಮಹಾಮಾರಿಯನ್ನು ಎಂದೂ ನೋಡಿರಲಿಲ್ಲ. ಎರಡನೆಯ ಅಲೆ ವಿರುದ್ಧ ಹೋರಾಡುತ್ತಿದ್ದೇವೆ. ವೆಂಟಿಲೇಟರ್, ಆಕ್ಸಿಜನ್ ಸೇರಿದಂತೆ ವೈದ್ಯಕೀಯ ಮೂಲಸೌಕರ್ಯಗಳನ್ನು ಹೆಚ್ಚಿಸಲಾಗಿದೆ. ಸಮರೋಪಾದಿಯಲ್ಲಿ ಆರೋಗ್ಯ ಕಾರ್ಯಕರ್ತರು ಕಾರ್ಯನಿರ್ವಹಿಸುತ್ತಿದ್ದಾರೆ. ದೇಶದ ಜನ ಸಂಕಷ್ಟ ಎದುರಿಸಿದ್ದಾರೆ. ಜೊತೆಗೆ ಸೋಂಕು ಹೊಡೆದೋಡಿಸಲು ಹೋರಾಟ ನಡೆಸಿದ್ದಾರೆ ಎಂದು ಹೇಳಿದ್ದಾರೆ.
ಇಡೀ ಜಗತ್ತನ್ನೇ ಕೊರೋನಾ ಸೋಂಕು ಕಂಗೆಡಿಸಿದೆ. ಭಾರತ ತನ್ನ ಶಕ್ತಿಯನ್ನು ಮೀರಿ ಹೋರಾಟ ನಡೆಸಿದೆ. ಆಧುನಿಕ ಜಗತ್ತು ಈ ಹಿಂದೆ ಇಂತಹ ಸಂಕಷ್ಟ ಅನುಭವಿಸಿರಲಿಲ್ಲ. ಕಳೆದ 100 ವರ್ಷದಲ್ಲಿ ಇಂತಹ ಸೋಂಕು ಕಾಣಿಸಿರಲಿಲ್ಲ. ಇದೊಂದು ದೊಡ್ಡ ಸಾಂಕ್ರಾಮಿಕ ರೋಗವಾಗಿದ್ದು, ಇಂತಹ ರೋಗವನ್ನು ಯಾರೂ ನೋಡಿಲ್ಲ. ಯಾರೂ ಕೇಳಿಲ್ಲ ಎಂದು ಹೇಳಿದ್ದಾರೆ.
ಲಸಿಕೆಯ ಮೂಲಕ ಕೊರೋನಾ ಹೋಗಲಾಡಿಸಲು ಕ್ರಮ ಕೈಗೊಳ್ಳಲಾಗಿದೆ. ಲಸಿಕೆ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ವ್ಯಾಕ್ಸಿನ್ ನೀಡಿಕೆ ಶೇಕಡ 70ರಿಂದ 90 ರಷ್ಟು ಏರಿಕೆಯಾಗಿದೆ. ಲಸಿಕೆಯೇ ನಮಗೆ ಸುರಕ್ಷಾ ಕವಚವಾಗಿದೆ. ಕೊರೋನಾ ರೂಪಾಂತರಿ ಅಸದೃಶ್ಯ ವೈರಿಯಾಗಿದೆ. ಭಾರತದಲ್ಲಿ ಲಸಿಕೆ ಉತ್ಪಾದನೆಯಾಗದಿದ್ದರೆ ಏನಾಗುತ್ತಿತ್ತು? ವಿದೇಶದಲ್ಲಿ ಲಸಿಕೆ ಉತ್ಪಾದನೆಯಾದರೂ ನಮಗೆ ಸಿಕ್ಕಿರಲಿಲ್ಲ. ಹೈಪಟೈಟಿಸ್ ಬಿ ಸೇರಿದಂತೆ ಅನೇಕ ಲಸಿಕೆಗಳು ನಮಗೆ ತಲುಪಲು ಬಹಳ ಸಮಯ ಬೇಕಾಗಿತ್ತು. ಲಸಿಕೆ ಉತ್ಪಾದನೆಗೆ ಮಿಷನ್ ಇಂದ್ರಧನುಷ್ ಯೋಜನೆ ರೂಪಿಸಲಾಗಿದೆ. ಮಕ್ಕಳನ್ನು ರಕ್ಷಿಸಲು ಲಸಿಕೆ ನೀಡಲಾಗುತ್ತಿದೆ ಎಂದು ಹೇಳಿದ್ದು, ದೇಶದಲ್ಲಿನ ಹೊಸ ಲಸಿಕೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.