ನವದೆಹಲಿ: ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯು “ಸುಳ್ಳಿನ ಕಂತೆ” ಮತ್ತು ಪ್ರತಿಯೊಂದು ಪುಟ “ಭಾರತವನ್ನು ತುಂಡು ಮಾಡುವ ಯತ್ನದಂತಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.
ಸ್ವಾತಂತ್ರ್ಯದ ಸಂದರ್ಭದಲ್ಲಿ ಮುಸ್ಲಿಂ ಲೀಗ್ ನಲ್ಲಿ ಇದ್ದಂತಹ ಚಿಂತನೆಯೇ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪ್ರತಿಫಲಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ರಾಜಸ್ಥಾನದ ಅಜ್ಮೀರ್‌ನಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಈ ಹೇಳಿಕೆ ನೀಡಿದ್ದು, ಮುಸ್ಲಿಂ ಲೀಗ್ ನ ವಿಚಾರಗಳನ್ನು ಭಾರತದ ಮೇಲೆ ಹೇರಲು ಕಾಂಗ್ರೆಸ್ ಬಯಸುತ್ತಿದೆ ಎಂದು ಆರೋಪಿಸಿದರು.
ಮುಸ್ಲಿಂ ಲೀಗ್ ಮುದ್ರೆ ಹೊಂದಿರುವ ಈ ಪ್ರಣಾಳಿಕೆಯಲ್ಲಿ ಉಳಿದಿದ್ದನ್ನು ಎಡಪಂಥೀಯರು ತೆಗೆದುಕೊಂಡಿದ್ದಾರೆ. ಇಂದು ಕಾಂಗ್ರೆಸ್‌ಗೆ ಯಾವುದೇ ತತ್ವಗಳು ಅಥವಾ ನೀತಿಗಳಿಲ್ಲ. ಕಾಂಗ್ರೆಸ್ ಎಲ್ಲವನ್ನು ಗುತ್ತಿಗೆ ಪಡೆದು ಇಡೀ ಪಕ್ಷವನ್ನು ಹೊರಗುತ್ತಿಗೆ ನೀಡಿದಂತಿದೆ ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಭ್ರಷ್ಟರನ್ನು ಉಳಿಸುವ ಪ್ರಯತ್ನ ಮಾಡುತ್ತಿದೆ. ಕಾಂಗ್ರೆಸ್ ಇರುವಲ್ಲಿ ಯಾವುದೇ ಅಭಿವೃದ್ಧಿ ಸಾಧ್ಯವಿಲ್ಲ. ಕಾಂಗ್ರೆಸ್ ಎಂದಿಗೂ ಬಡವರು, ಅಂಚಿನಲ್ಲಿರುವವರು ಮತ್ತು ಯುವಕರ ಬಗ್ಗೆ ಯೋಚಿಸಲಿಲ್ಲ. ಕಾಂಗ್ರೆಸ್ ನವರು ಸಾರ್ವಜನಿಕ ಹಣವನ್ನು ಲೂಟಿ ಮಾಡುವುದು ತಮ್ಮ ಪೂರ್ವಜರ ಹಕ್ಕು ಎಂದು ಪರಿಗಣಿಸಿದ್ದಾರೆ. ಕಳೆದ 10 ವರ್ಷಗಳಲ್ಲಿ ನಾವು ಈ ರೋಗಕ್ಕೆ ಶಾಶ್ವತ ಚಿಕಿತ್ಸೆ ಒದಗಿಸಿದ್ದೇವೆ ಎಂದು ಹೇಳಿದ್ದಾರೆ.