ಆಧಾರ್ ಕಾರ್ಡ್ ಇಂದು ಅತ್ಯಗತ್ಯವಾಗಿದೆ. ಅದರಲ್ಲೂ ಸರ್ಕಾರಿ ಸೌಲಭ್ಯ ಪಡೆಯಲು ಆಧಾರ್ ಕಾರ್ಡ್ ಒಂದು ಪ್ರಮುಖ ದಾಖಲೆಯಾಗಿ ಬಳಕೆಯಾಗುತ್ತಿದೆ. ಆದರೆ ಇದೇ ಆಧಾರ್ ಕಾರ್ಡ್ ತಪ್ಪಿಸಿಕೊಂಡಿದ್ದ ಮಕ್ಕಳನ್ನು ತಮ್ಮ ಕುಟುಂಬದೊಂದಿಗೆ ಒಂದುಗೂಡಲು ಸಹಾಯ ಮಾಡಿದ ಆನೇಕ ಪ್ರಕರಣಗಳು ನಡೆದಿವೆ. ಅಂತಹ ಒಂದು ಭಾವಾನಾತ್ಮಕ ಘಟನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಹಂಚಿಕೊಂಡಿದ್ದಾರೆ.
ಇದಕ್ಕೆ ವೇದಿಕೆಯಾಗಿದ್ದು, ಗುಜರಾತಿನ ಗಾಂಧಿನಗರದಲ್ಲಿ ನಡೆಯುತ್ತಿರುವ ʼಡಿಜಿಟಲ್ ಇಂಡಿಯಾ ವೀಕ್ 2022ʼ. ಇದರಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರು, ಕುಟುಂಬದಿಂದ ತಪ್ಪಿಸಿಕೊಂಡಿದ್ದ ಬಾಲಕಿಯೊಬ್ಬಳು ಎರಡು ವರ್ಷಗಳ ಬಳಿಕ ಆಧಾರ್ ಕಾರ್ಡ್ ಸಹಾಯದಿಂದ ಹೇಗೆ ತನ್ನ ಕುಟುಂಬವನ್ನು ಮರಳಿ ಸೇರಿದಳು ಎಂಬುದನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ. ಈ ವಿಚಾರವನ್ನು ಖುದ್ದು ಬಾಲಕಿಯೇ ಪ್ರಧಾನಿಯವರಿಗೆ ತಿಳಿಸಿದ್ದಾಳೆ.
ಈ ಬಾಲಕಿ ತನ್ನ ಕುಟುಂಬದೊಂದಿಗೆ ಸಂಬಂಧಿಕರ ಊರಿಗೆ ತೆರಳಲು ರೈಲು ನಿಲ್ದಾಣದಲ್ಲಿದ್ದ ವೇಳೆ ಅಪರಿಚಿತನೊಬ್ಬ ಆಕೆಯನ್ನು ಕರೆದುಕೊಂಡು ಹೋಗಿದ್ದಾನೆ. ಬಳಿಕ ಆಕೆಯನ್ನು ಸೀತಾಪುರದ ಆನಾಥಾಲಯಕ್ಕೆ ಸೇರಿಸಲಾಗಿದೆ. ಅಲ್ಲಿಯೇ ಆಕೆ ಎರಡು ವರ್ಷಗಳ ಕಾಲವಿದ್ದು 12 ನೇ ತರಗತಿ ಪರೀಕ್ಷೆ ಬರೆದ ಬಳಿಕ ಆಕೆ ಜೊತೆಗಿದ್ದವರು ಸಂಬಂಧಿಕರ ಊರಿಗೆ ತೆರಳಿದ್ದಾರೆ. ಆದರೆ ಅಂತಹ ಅವಕಾಶವಿರದ ಬಾಲಕಿಯನ್ನು ಲಕ್ನೋ ವಿಭಾಗಕ್ಕೆ ಕಳುಹಿಸಲಾಗಿದೆ.
ಅಲ್ಲಿ ಆಕೆಗೆ ಆಧಾರ್ ಕಾರ್ಡ್ ಮಾಡಿದಲು ಹೋದಾಗ ಬಾಲಕಿ ಈಗಾಗಲೇ ಆಧಾರ್ ಹೊಂದಿರುವುದು ಬಯೋಮೆಟ್ರಿಕ್ ಮೂಲಕ ತಿಳಿದುಬಂದಿದೆ. ಕೂಡಲೇ ಆಕೆಯ ಪೋಷಕರನ್ನು ಪತ್ತೆ ಹಚ್ಚಿದ ಅಧಿಕಾರಿಗಳು ಬಾಲಕಿಯನ್ನು ಕುಟುಂಬದೊಂದಿಗೆ ಒಂದುಗೂಡಿಸಿದ್ದಾರೆ.
ಇದೇ ಸಂದರ್ಭದಲ್ಲಿ ಡಿಜಿಟಲ್ ಯಾವ ರೀತಿ ಶ್ರೀ ಸಾಮಾನ್ಯನಿಗೂ ನೆರವಾಗುತ್ತಿದೆ ಎಂಬುದನ್ನು ವಿವರಿಸಿದ ಪ್ರಧಾನಿ ಮೋದಿ, ಇತ್ತೀಚೆಗೆ ಭಿಕ್ಷುಕನೊಬ್ಬ ಕ್ಯೂಆರ್ ಕೋಡ್ ಬಳಸಿ ಭಿಕ್ಷೆ ಬೇಡುತ್ತಿದ್ದ ವಿಡಿಯೋವನ್ನು ನಾನು ನೋಡಿದೆ. ಅಷ್ಟೇ ಅಲ್ಲ ಇಂದು ಬೀದಿ ವ್ಯಾಪಾರಿ ಕೂಡಾ, ದೊಡ್ಡ ದೊಡ್ಡ ಮಾಲ್ ಗಳಲ್ಲಿ ನಡೆಯುವಂತೆ ಆನ್ ಲೈನ್ ಮೂಲಕವೇ ತನ್ನ ವಹಿವಾಟು ನಡೆಸುತ್ತಿದ್ದಾನೆ ಎಂದು ಹೇಳಿದರು.