ನವದೆಹಲಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಮತ್ತು ಕೃಷಿಗೆ ಸಂಬಂಧಿಸಿದ ಇತರ ಯೋಜನೆಗಳು ದೇಶದ ಕೋಟ್ಯಂತರ ರೈತರಿಗೆ ಹೊಸ ಶಕ್ತಿ ನೀಡುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನಮ್ಮ ರೈತರ ಬಗ್ಗೆ ದೇಶವು ಹೆಮ್ಮೆಪಡುತ್ತದೆ. ನಮ್ಮ ರೈತರು ಸಶಕ್ತರಾದಾಗ ನವ ಭಾರತವು ಹೆಚ್ಚು ಸಮೃದ್ಧವಾಗಿರುತ್ತದೆ. ರೈತರು ಬಲಿಷ್ಠರಾದಾಗ ರಾಷ್ಟ್ರ ಅಭಿವೃದ್ಧಿಯಾಗುತ್ತದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ,
PM-KISAN ಯೋಜನೆಯಡಿಯಲ್ಲಿ ಅರ್ಹ ರೈತರ ಕುಟುಂಬಕ್ಕೆ ವರ್ಷಕ್ಕೆ ಆರು ಸಾವಿರ ರೂಪಾಯಿಗಳ ಆರ್ಥಿಕ ಪ್ರಯೋಜನವನ್ನು ಒದಗಿಸಲಾಗುತ್ತದೆ. ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಲಾಗುತ್ತಿದ್ದು, ಮೂರು ಕಂತುಗಳಲ್ಲಿ ಎರಡು ಸಾವಿರ ರೂ. ನೀಡಲಾಗುವುದು. ಇದುವರೆಗೆ 11 ಕೋಟಿ 30 ಲಕ್ಷಕ್ಕೂ ಹೆಚ್ಚು ರೈತರ ಕುಟುಂಬಕ್ಕೆ ಪ್ರಯೋಜನ ಸಿಕ್ಕಿದೆ ಎಂದಿದ್ದಾರೆ.
ಕೃಷಿ ಮೂಲಸೌಕರ್ಯ ನಿಧಿಯಡಿ ಕೃಷಿ ಸಂಬಂಧಿತ ಮೂಲಸೌಕರ್ಯಗಳ ಅಭಿವೃದ್ಧಿಗೆ ಒಂದು ಲಕ್ಷ ಕೋಟಿ ಸಾಲ ಸೌಲಭ್ಯ ಒದಗಿಸಲಾಗಿದೆ. ಒಂದು ಕೋಟಿ 73 ಲಕ್ಷಕ್ಕೂ ಹೆಚ್ಚು ರೈತರು ಇ-ನ್ಯಾಮ್ ವೇದಿಕೆಯಲ್ಲಿ ನೋಂದಾಯಿಸಿಕೊಂಡಿದ್ದಾರೆ. ರಾಷ್ಟ್ರೀಯ ಕೃಷಿ ಮಾರುಕಟ್ಟೆ (e-NAM) ಭಾರತದಲ್ಲಿ ಕೃಷಿ ಸರಕುಗಳಿಗೆ ಆನ್‌ಲೈನ್ ವ್ಯಾಪಾರ ವೇದಿಕೆಯಾಗಿದೆ ಎಂದರು.