ರೋಮ್: ಇಟಲಿ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ರೋಮ್ ನ ಪಿಯಾಝಾ ಗಾಂಧಿಗೆ ಭೇಟಿ ನೀಡಿ ಮಹಾತ್ಮ ಗಾಂಧಿಗೆ ನಮನ ಸಲ್ಲಿಸಿದ್ದಾರೆ. ಈ ವೇಳೆ ಅಲ್ಲಿ ನೆರೆದಿದ್ದ ಅನಿವಾಸಿ ಭಾರತೀಯರು, ಮೋದಿ ಅಭಿಮಾನಿಗಳು ಸಂಸ್ಕೃತ ಶ್ಲೋಕದಿಂದ ಭಾರತದ ಪ್ರಧಾನಿಯನ್ನು ಸ್ವಾಗತಿಸಿದ್ದಾರೆ.
ನೆರೆದಿದ್ದವರಲ್ಲೊಬ್ಬರು ನರೇಂದ್ರ ಭಾಯ್ ಕೆಮ್ ಛೋ ಎಂದಾಗ ಮಜಾ ಮಾ ಛೋ ಎಂದು ಪ್ರಧಾನಿ ಮೋದಿ ಹೇಳಿರುವ ವಿಡಿಯೋ ವೈರಲ್ ಆಗಿದೆ. ಅಂದ್ರೆ ಗುಜರಾತಿ ಭಾಷೆಯಲ್ಲಿ ಪ್ರಧಾನಿಯವರನ್ನು ಹೇಗಿದ್ದೀರಿ ಎಂದು ಕೇಳಿದ್ದಾರೆ. ಇದಕ್ಕೆ ಪ್ರಧಾನಿ ನಾನು ಚೆನ್ನಾಗಿದ್ದೇನೆ ಎಂದು ನಗುತ್ತಾ ಪ್ರತಿಕ್ರಿಯಿಸಿದ್ದಾರೆ.
ಭಾರತದ ಪ್ರಧಾನ ಮಂತ್ರಿಯನ್ನು ಸಂಸ್ಕೃತ ಶ್ಲೋಕದಿಂದ ಸ್ವಾಗತಿಸಿದಾಗ, ಮೋದಿ ಕೈ ಮುಗಿದು ನಿಂತಿದ್ದಾರೆ. ಅಲ್ಲದೆ ಗುಂಪಿನಲ್ಲಿದ್ದ ಜನರು ಓಂ ನಮಃ ಶಿವಾಯ, ಭಾರತ್ ಮಾತಾ ಕೀ ಜೈ ಎಂದೆಲ್ಲಾ ಘೋಷ ವಾಕ್ಯ ಮೊಳಗಿಸಿದ್ದಾರೆ.
ಯೋಗ ಮತ್ತು ಆಯುರ್ವೇದದಲ್ಲಿನ ತನ್ನ ಕೆಲಸದ ಬಗ್ಗೆ ವ್ಯಕ್ತಿಯೊಬ್ಬ ಗುಜರಾತಿಯಲ್ಲಿ ಮಾತನಾಡಲು ಪ್ರಾರಂಭಿಸಿದಾಗ, ಪ್ರಧಾನಿ ಮೋದಿ ತಮ್ಮ ಮಾತೃಭಾಷೆಯಲ್ಲಿ ಉತ್ತರಿಸಿದ್ದಾರೆ.