ಪ್ರಧಾನಿ ನರೇಂದ್ರ ಮೋದಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಕ್ಕೆ ನಿರಂತರವಾಗಿ ಭೇಟಿ ನೀಡಿ ತೊಡಗಿದ್ದಾರೆ. ಇಂದು ಶಿವಮೊಗ್ಗ, ಬೆಳಗಾವಿಗೆ ಭೇಟಿ ನೀಡಲಿರುವ ಪ್ರಧಾನಿಯವರು ಮಾರ್ಚ್ 11ರಂದು ಮೈಸೂರು- ಬೆಂಗಳೂರು ದಶಪಥ ಹೆದ್ದಾರಿ ಉದ್ಘಾಟಿಸಲಿದ್ದಾರೆ.
ಬಿಡದಿಯಿಂದ ಮದ್ದೂರುವರೆಗೆ 40 ಕಿಲೋಮೀಟರ್ ರೋಡ್ ಶೋ ನಡೆಸಲಿದ್ದು, ಮಂಡ್ಯ ಜಿಲ್ಲೆಯ ನಿಡಘಟ್ಟ ಬಳಿ ಬೃಹತ್ ಸಮಾವೇಶದಲ್ಲಿ ಭಾಗವಹಿಸುವರು. ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಆಗಾಗ ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ಬಿಜೆಪಿಯಲ್ಲಿ ಹೊಸ ಸಂಚಲನ ಮೂಡಿಸಿದೆ.
ಮಾರ್ಚ್ 11 ರಂದು ಮೋದಿ ಜೆಡಿಎಸ್ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಬೃಹತ್ ರೋಡ್ ಶೋ ಕೈಗೊಂಡಿದ್ದಾರೆ. ಕೇಸರಿ ಪಡೆಯಲ್ಲಿ ಉತ್ಸಾಹ ತುಂಬಲು ಮುಂದಾಗಿದ್ದಾರೆ. ಇದು ಜೆಡಿಎಸ್ ಗೆ ನುಂಗಲಾರದ ತುತ್ತಾಗಿದೆ. ಹಳೆ ಮೈಸೂರು ಭಾಗದಲ್ಲಿ ಮಂಡ್ಯ ಜೆಡಿಎಸ್ ಭದ್ರಕೋಟೆಯಾಗಿದ್ದು, ಈ ಜಿಲ್ಲೆಯಲ್ಲಿ ಬಿಜೆಪಿ ಕಮಲ ಅರಳಿಸಲು ಮೋದಿ, ಅಮಿತ್ ಶಾ ಹಾಗೂ ರಾಜ್ಯ ಬಿಜೆಪಿ ನಾಯಕರು ಕಾರ್ಯತಂತ್ರ ರೂಪಿಸಿದ್ದಾರೆ.