ನವದೆಹಲಿ: ಗುಲಾಮಗಿರಿಯ ಮನಸ್ಥಿತಿಯನ್ನು ಪ್ರತಿಬಿಂಬಿಸುವ ಗುಲಾಮಗಿರಿಯ ಅವಧಿಯ ಕಾನೂನುಗಳನ್ನು ರದ್ದುಗೊಳಿಸಲು ಸರ್ಕಾರ ಕ್ರಮ ತೆಗೆದುಕೊಂಡಿದೆ. ಇ-ಶ್ರಮ್ ಪೋರ್ಟಲ್ ನೊಂದಿಗೆ ರಾಜ್ಯದ ಪೋರ್ಟಲ್ ಗಳನ್ನು ಸಂಯೋಜಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾರ್ಮಿಕ ಮಂತ್ರಿಗಳ ರಾಷ್ಟ್ರೀಯ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ದೇಶವು ಈಗ ಬದಲಾಗುತ್ತಿದೆ. ಕಾರ್ಮಿಕ ಕಾನೂನುಗಳನ್ನು ಸುಧಾರಿಸಿ ಸರಳೀಕರಿಸುತ್ತಿದೆ. 29 ಕಾರ್ಮಿಕ ಕಾನೂನುಗಳನ್ನು 4 ಸರಳ ಕಾರ್ಮಿಕ ಸಂಹಿತೆಗಳಾಗಿ ಪರಿವರ್ತಿಸಲಾಗಿದೆ. ಇದು ಕನಿಷ್ಠ ವೇತನ, ಉದ್ಯೋಗ ಭದ್ರತೆ, ಸಾಮಾಜಿಕ ಭದ್ರತೆ ಮತ್ತು ಆರೋಗ್ಯ ಭದ್ರತೆಯ ಮೂಲಕ ಕಾರ್ಮಿಕರ ಸಬಲೀಕರಣವನ್ನು ಖಚಿತಪಡಿಸುತ್ತದೆ ಎಂದರು.
ಸಂಘಟಿತ ಮತ್ತು ಅಸಂಘಟಿತ ವಲಯದ ಕೋಟಿಗಟ್ಟಲೆ ಕಾರ್ಮಿಕರಿಗಾಗಿ ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ. . ಇ-ಶ್ರಮ್ ಪೋರ್ಟಲ್ ಕಾರ್ಮಿಕ ಬಲವನ್ನು ಸಾಮಾಜಿಕ ಭದ್ರತೆಯ ವ್ಯಾಪ್ತಿಯೊಳಗೆ ತರಲು ಪ್ರಮುಖ ಕ್ರಮಗಳಲ್ಲಿ ಒಂದಾಗಿದೆ ಎಂದು ಹೇಳಿದರು.
ಒಂದು ವರ್ಷದಲ್ಲಿ 28 ಕೋಟಿ ಕಾರ್ಮಿಕರು ಪೋರ್ಟಲ್ ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಇದು ವಿಶೇಷವಾಗಿ ಕಟ್ಟಡ ಕಾರ್ಮಿಕರು, ವಲಸೆ ಕಾರ್ಮಿಕರು ಮತ್ತು ಗೃಹ ಕಾರ್ಮಿಕರಿಗೆ ಪ್ರಯೋಜನವನ್ನು ನೀಡಿದೆ ಎಂದರು.
ಪ್ರಧಾನ ಮಂತ್ರಿ ಶ್ರಮ-ಯೋಗಿ ಮಾನ್ ಧನ್ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ, ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆಗಳಂತಹ ಸರ್ಕಾರದ ವಿವಿಧ ಯೋಜನೆಗಳು ಕಾರ್ಮಿಕರಿಗೆ ಭದ್ರತೆಯನ್ನು ನೀಡಿವೆ. ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರು ನಮ್ಮ ಕಾರ್ಯಪಡೆಯ ಅವಿಭಾಜ್ಯ ಅಂಗವಾಗಿದ್ದಾರೆ. ಅವರಿಗಾಗಿ ಇರುವ ‘ಸೆಸ್’ ಸಂಪೂರ್ಣ ಬಳಸಿಕೊಳ್ಳುವಂತೆ ವಿನಂತಿಸಿದರು.
ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಇಂದಿನಿಂದ ಆಂಧ್ರಪ್ರದೇಶದ ತಿರುಪತಿಯಲ್ಲಿ ಎರಡು ದಿನಗಳ ಸಮ್ಮೇಳನವನ್ನು ಆಯೋಜಿಸಿದೆ. ಕಾನ್ಫರೆನ್ಸಿಂಗ್ ಮೂಲಕ ಪ್ರಧಾನಿ ಮಾತನಾಡಿದರು.