
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ(ಪಿಎಂ-ಕಿಸಾನ್) ಅಡಿಯಲ್ಲಿ 8 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ನೇರ ಲಾಭ ವರ್ಗಾವಣೆ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೋಮವಾರ 16,000 ಕೋಟಿ ರೂ.ಗಳ 13 ನೇ ಕಂತನ್ನು ಬಿಡುಗಡೆ ಮಾಡಿದರು.
ಯೋಜನೆಯಡಿ, ಅರ್ಹ ರೈತ ಕುಟುಂಬಗಳಿಗೆ ಪ್ರತಿ ವರ್ಷಕ್ಕೆ 6,000 ರೂ.ಗಳನ್ನು ತಲಾ 2,000 ರೂ.ಗಳ ಮೂರು ಸಮಾನ ಕಂತುಗಳಲ್ಲಿ ನೀಡಲಾಗುತ್ತದೆ.
ಹಣ ವರ್ಗಾವಣೆ ವೇಳೆ ಕಾರ್ಯಕ್ರಮದ ವೇಳೆ ಮೋದಿ ಅವರು ಪುನರಾಭಿವೃದ್ಧಿಗೊಂಡ ಬೆಳಗಾವಿ ರೈಲು ನಿಲ್ದಾಣದ ಕಟ್ಟಡವನ್ನು ದೇಶಕ್ಕೆ ಸಮರ್ಪಿಸಿದರು. ಪ್ರಯಾಣಿಕರಿಗೆ ವಿಶ್ವದರ್ಜೆಯ ಸೌಕರ್ಯಗಳನ್ನು ಒದಗಿಸಲು ಅಂದಾಜು 190 ಕೋಟಿ ರೂಪಾಯಿ ವೆಚ್ಚದಲ್ಲಿ ರೈಲು ನಿಲ್ದಾಣವನ್ನು ಮರುಅಭಿವೃದ್ಧಿಗೊಳಿಸಲಾಗಿದೆ.
ಪ್ರಧಾನಿಯವರು ದೇಶಕ್ಕೆ ಸಮರ್ಪಿಸಿದ ಮತ್ತೊಂದು ರೈಲ್ವೇ ಯೋಜನೆ ಬೆಳಗಾವಿಯಲ್ಲಿ ಲೋಂಡಾ-ಬೆಳಗಾವಿ-ಘಟಪ್ರಭಾ ವಿಭಾಗದ ನಡುವಿನ ರೈಲು ಮಾರ್ಗ ದ್ವಿಗುಣಗೊಳಿಸುವ ಯೋಜನೆಯಾಗಿದೆ.
ಕಾರ್ಯಕ್ರಮದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಕೇಂದ್ರ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯ ಸರ್ಕಾರದ ಸಚಿವರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಕರ್ನಾಟಕಕ್ಕೆ ಪ್ರಧಾನಿ ಮೋದಿ ಒಂದು ದಿನದ ಪ್ರವಾಸದಲ್ಲಿದ್ದು, ಬೆಳಗಾವಿ ಕಾರ್ಯಕ್ರಮಕ್ಕೆ ಮೊದಲು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟಿಸಿದರು.