
ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರು ಶಿವಮೊಗ್ಗ ಹೊರವಲಯದ ಸೋಗಾನೆಯಲ್ಲಿ ನಿರ್ಮಿಸಿದ ನೂತನ ವಿಮಾನ ನಿಲ್ದಾಣ ಉದ್ಘಾಟನೆಗೆ ಬಂದು ಹೋಗಿ ಮೂರು ತಿಂಗಳಾದರೂ ಈ ಕಾರ್ಯಕ್ರಮಕ್ಕೆ ಜನರನ್ನು ಕರೆತಂದಿದ್ದ ಖಾಸಗಿ ಬಸ್ ಗಳ ಮಾಲೀಕರಿಗೆ ಹಣ ಪಾವತಿಸಿಲ್ಲ.
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಜನ್ಮದಿನ ಅಂಗವಾಗಿ ಫೆಬ್ರವರಿ 27ರಂದು ಪ್ರಧಾನಿ ಮೋದಿ ವಿಮಾನ ನಿಲ್ದಾಣ ಉದ್ಘಾಟನೆ ನೆರವೇರಿಸಿದ್ದರು. ಉದ್ಘಾಟನೆ ಕಾರ್ಯಕ್ರಮಕ್ಕಾಗಿ 58 ಸಿಟಿ ಬಸ್, 14 ಶಾಲಾ ಬಸ್ ಸೇರಿದಂತೆ 301 ಖಾಸಗಿ ಬಸ್ ಗಳನ್ನು ಕೂಡ ಜನರನ್ನು ಕರೆತರಲು ಬಳಸಿಕೊಳ್ಳಲಾಗಿತ್ತು. ಪ್ರತಿ ಕಿ.ಮೀ. ಗೆ 43 ರೂಪಾಯಿ ದರದಲ್ಲಿ 300 ಕಿಲೋಮೀಟರ್ ಲೆಕ್ಕದಲ್ಲಿ ಹಣ ಪಾವತಿಸಲು ಜಿಲ್ಲಾಡಳಿತಕ್ಕೆ ಖಾಸಗಿ ಬಸ್ ಮಾಲೀಕರು ವಿವರವಾದ ಪಟ್ಟಿ ನೀಡಿದ್ದಾರೆ. ಆದರೆ, ಜಿಲ್ಲಾಡಳಿತದಿಂದ ಇನ್ನೂ ಖಾಸಗಿ ಬಸ್ ಮಾಲೀಕರಿಗೆ ಹಣ ಪಾವತಿಸಿಲ್ಲ.
ಇದೇ ಕಾರ್ಯಕ್ರಮಕ್ಕಾಗಿ 1200ಕ್ಕೂ ಹೆಚ್ಚು ಕೆಎಸ್ಆರ್ಟಿಸಿ ಬಸ್ ಗಳನ್ನು ಜನರನ್ನು ಕರೆತರಲು ಬಳಸಿಕೊಳ್ಳಲಾಗಿದ್ದು, ಕೆಎಸ್ಆರ್ಟಿಸಿ ಬಸ್ ಗಳಿಗೆ ಜಿಲ್ಲಾಡಳಿತದಿಂದ ಹಣ ಪಾವತಿಸಲಾಗಿದೆ. ಆದರೆ ಮೂರು ತಿಂಗಳೇ ಕಳೆದರೂ ಖಾಸಗಿ ಬಸ್ ಮಾಲೀಕರಿಗೆ ಹಣ ಕೊಟ್ಟು ತಲುಪಿಲ್ಲ. ಸಂಸದ ಬಿ.ವೈ. ರಾಘವೇಂದ್ರ ಮತ್ತು ಜಿಲ್ಲಾಧಿಕಾರಿ ಆರ್. ಸೆಲ್ವಮಣಿ ಅವರ ಗಮನಕ್ಕೆ ಕೂಡಲೇ ಖಾಸಗಿ ಬಸ್ ಮಾಲಿಕರಿಗೆ ಹಣ ಕೊಡಿಸಲು ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ.