ತಮಿಳುನಾಡು: ಕೊಯಮತ್ತೂರು ಜಿಲ್ಲೆಯ ವೆಲ್ಲಲೂರು ನಗರ ಪಂಚಾಯತಿ ಕಚೇರಿಯಿಂದ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರವನ್ನು ವಾರ್ಡ್ ಸದಸ್ಯರೊಬ್ಬರು ತೆಗೆದ ಕಾರಣ ಬಿಜೆಪಿ ಸದಸ್ಯರು ಪ್ರತಿಭಟನೆಗೆ ಮುಂದಾಗಿದ್ದಾರೆ.
ಇತ್ತೀಚೆಗೆ ಬಿಜೆಪಿ ಸದಸ್ಯರು ಕಾರ್ಯನಿರ್ವಹಣಾಧಿಕಾರಿಗಳ ಕೊಠಡಿಯೊಳಗೆ ಪ್ರಧಾನಿ ಮೋದಿಯವರ ಭಾವಚಿತ್ರವನ್ನು ನೇತು ಹಾಕಿದ್ದರು. ಬಳಿಕ ವಾರ್ಡ್ ಸದಸ್ಯ ಕನಕರಾಜ್ ಭಾವಚಿತ್ರ ತೆಗೆಸಿದ್ದಾರೆ. ಕನಕರಾಜ್ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದರೂ, ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಅವರನ್ನು ಬೆಂಬಲಿಸಿತ್ತು.
ಇದೀಗ ಕನಕರಾಜ್ ವಿರುದ್ಧ ಇಲ್ಲಿನ ಬಿಜೆಪಿ ಸದಸ್ಯರು ಪೋತನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಧಾನಿ ಭಾವಚಿತ್ರ ತೆಗೆಸಿರುವ ಕಾರಣ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಆದರೆ, ಪ್ರಧಾನಿಯವರ ಚಿತ್ರಕ್ಕೆ ಸಂಬಂಧಿಸಿದ ಘಟನೆ ಇದೇ ಮೊದಲಲ್ಲ. ಇತ್ತೀಚೆಗೆ, ಮಧ್ಯಪ್ರದೇಶದ ಇಂದೋರ್ ನಲ್ಲಿ ವ್ಯಕ್ತಿಯೊಬ್ಬರು ಪ್ರಧಾನಿ ಮೋದಿಯವರ ಭಾವಚಿತ್ರವನ್ನು ತೆಗೆಯದಿದ್ದರೆ ಮನೆಯಿಂದ ಹೊರಹಾಕುವುದಾಗಿ ಮನೆಯ ಮಾಲೀಕರು ಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದರು.