ನವದೆಹಲಿ: ಪಾಕಿಸ್ತಾನದ ಮೇಲೆ ವಿಶ್ವಾಸವಿದೆ, ಭಾರತೀಯ ಸೇನೆ ಮೇಲೆ ನಿಮಗೆ ವಿಶ್ವಾಸ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನರೇಂದ್ರ ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಹಿನ್ನೆಲೆಯಲ್ಲಿ ಭಾಷಣ ಮಾಡಿದ ಅವರು, 2028ರಲ್ಲಿಯೂ ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಲಿ ಎಂದು ಹೇಳಿದ್ದಾರೆ.
ಇವರು ಯಾರ ಬಗ್ಗೆ ಟೀಕೆ ಮಾಡುತ್ತಾರೆಯೋ ಅವರಿಗೆ ಶಕ್ತಿ ಸಿಗಲಿದೆ. ನಾನೇ ಇದ್ದೇನೆ ನೋಡಿ ಇದಕ್ಕೆ ಉದಾಹರಣೆ ಎಂದು ಹೇಳಿದ್ದಾರೆ.
ಕೆಲವರು ಪಕ್ಷದ ಬಗ್ಗೆ ಯೋಚಿಸುತ್ತಾರೆ, ದೇಶದ ಬಗ್ಗೆ ಯೋಚಿಸುವುದಿಲ್ಲ. ದೇಶಕ್ಕೆ ಜೈಕಾರ ಹಾಕುವುದನ್ನು ಇವರು ಸಹಿಸುವುದಿಲ್ಲ. ನಾಲ್ಕು ದಿಕ್ಕುಗಳಲ್ಲಿಯೂ ದೇಶದ ಬಗ್ಗೆ ಜೈಕಾರ ಹಾಕುತ್ತಾರೆ. ನೀವು ಟೀಕಿಸಿದಷ್ಟು ನಾವು ಬಲಿಷ್ಠವಾಗುತ್ತೇವೆ. ಕಪ್ಪು ಬಟ್ಟೆ ಧರಿಸಿ ವಿಪಕ್ಷ ಸದಸ್ಯರು ಸಂಸತ್ತಿಗೆ ಆಗಮಿಸಿದ್ದಾರೆ. ಕುಟುಂಬ ರಾಜಕೀಯ ವಿರೋಧಿಸುವುದು ಕಾಂಗ್ರೆಸ್ ಗೆ ಇಷ್ಟವಾಗುವುದಿಲ್ಲ. ಅದಕ್ಕೆ ಕುಟುಂಬ ರಾಜಕಾರಣ ದರ್ಬಾರ್ ಇಷ್ಟ. ಅವರ ಮಕ್ಕಳು, ಮೊಮ್ಮಕ್ಕಳು ದರ್ಬಾರ್ ವ್ಯವಸ್ಥೆಯಲ್ಲಿದ್ದಾರೆ. ಕಾಂಗ್ರೆಸ್ ಒಳ್ಳೆಯ ನಾಯಕರನ್ನು ರಾಜಕೀಯವಾಗಿ ಮುಗಿಸಿದೆ. ಅಂಬೇಡ್ಕರ್ ಅವರನ್ನು ಎರಡು ಬಾರಿ ಸೋಲಿಸಿದೆ. ಕಾಂಗ್ರೆಸ್ ಪಕ್ಷದ ಸಂಸ್ಥಾಪಕ ಒಬ್ಬ ವಿದೇಶಿಗ. ಕಾಂಗ್ರೆಸ್ ಪಕ್ಷ ಸ್ಥಾಪಿಸಿದ್ದು ಎ.ಒ. ಹ್ಯೂಮ್. ಕಾಂಗ್ರೆಸ್ ಭಾರತದ ಧ್ವಜದ ಮಾದರಿ ಕಳವು ಮಾಡಿದೆ. ತ್ರಿವರ್ಣ ಧ್ವಜ ನೋಡಿದರೆ ಮತ ಹಾಕುತ್ತಾರೆ ಎಂದು ಭಾವಿಸಿದೆ ಎಂದು ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ ನಡೆಸಿದ್ದಾರೆ.