
ಮೈಸೂರು: ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 8 ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಅಂದು ಸಂಜೆ ವಿಶೇಷ ವಿಮಾನದಲ್ಲಿ ಮೈಸೂರಿಗೆ ಆಗಮಿಸಿ ವಾಸ್ತವ್ಯ ಹೂಡಲಿದ್ದಾರೆ.
ಏಪ್ರಿಲ್ 9 ರಂದು ಬೆಳಿಗ್ಗೆ 6 ಗಂಟೆಗೆ ಹೆಲಿಕಾಪ್ಟರ್ ನಲ್ಲಿ ಬಂಡಿಪುರಕ್ಕೆ ತೆರಳಲಿದ್ದು, ಸಫಾರಿಯಲ್ಲಿ ಭಾಗವಹಿಸಲಿದ್ದಾರೆ. ನಂತರ ಮಧುಮಲೈ ಅರಣ್ಯದ ತೆಪ್ಪಕಾಡು ಆನೆ ಶಿಬಿರಕ್ಕೆ ಭೇಟಿ ನೀಡಲಿರುವ ಪ್ರಧಾನಿ ಮೋದಿ ಬೊಮ್ಮ ಮತ್ತು ತಂಡದವರನ್ನು ಭೇಟಿ ಮಾಡಲಿದ್ದಾರೆ. ಬೊಮ್ಮ ಮತ್ತು ಬೆಳ್ಳಿ ದಂಪತಿ ಅನಾಥ ಆನೆ ಮರಿಗಳ ಆರೈಕೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದು, ಅವರ ಕುರಿತಾಗಿ ನಿರ್ಮಿಸಿದ ಸಾಕ್ಷ್ಯಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ದೊರೆತಿದೆ.
ನಂತರ ಪ್ರಧಾನಿಯವರು ಹೆಲಿಕಾಪ್ಟರ್ ನಲ್ಲಿ ಮೈಸೂರಿಗೆ ಆಗಮಿಸಿ ಬೆಳಗ್ಗೆ 10 ಗಂಟೆಗೆ ಕರ್ನಾಟಕ ರಾಜ್ಯ ಮುಕ್ತ ವಿವಿ ಘಟಿಕೋತ್ಸವ ಭವನದಲ್ಲಿ ನಡೆಯುವ ಬಂಡಿಪುರ ಹುಲಿ ಯೋಜನೆಯ 50ನೇ ವರ್ಷದ ಸಂಭ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ 1 ಗಂಟೆಗೆ ಮೈಸೂರಿನಿಂದ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.