
ಮೈಸೂರು: ನಿಮಗೆಲ್ಲಾ ನನ್ನ ನಮಸ್ಕಾರಗಳು, ತಾಯಿ ಚಾಮುಂಡೇಶ್ವರಿ ಆಶೀರ್ವಾದ ಪಡೆಯುವ ಅವಕಾಶ ಸಿಕ್ಕಿದೆ ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದ ಪ್ರಧಾನಿ ಮೋದಿ ಹೇಳಿದ್ದಾರೆ.
ಮೈಸೂರಿನ ಮಹಾರಾಜ ಕಾಲೇಜ್ ಮೈದಾನದಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿಕೂಟದ ಲೋಕಸಭೆ ಚುನಾವಣೆ ಸಮಾವೇಶದಲ್ಲಿ ಮಾತನಾಡಿದ ಅವರು, ತಾಯಿ ಭುವನೇಶ್ವರಿ, ತಾಯಿ ಕಾವೇರಿ ಮಾತೆಗೆ ಪ್ರಣಾಮಗಳು ಎಂದು ಹೇಳಿದ್ದಾರೆ.
ಹಿರಿಯ ರಾಜಕೀಯ ನೇತಾರ ದೇವೇಗೌಡರ ಆಶೀರ್ವಾದದೊಂದಿಗೆ ಜೆಡಿಎಸ್ ಜೊತೆ ಕೈಜೋಡಿಸಿದ್ದೇವೆ. ಭಾರತೀಯ ರಾಜಕೀಯದ ಹಿರಿಯ ನೇತಾರರಾದ ದೇವೇಗೌಡರ ಆಶೀರ್ವಾದ ಪಡೆಯುವುದು ದೊಡ್ಡ ಸೌಭಾಗ್ಯವಾಗಿದೆ. ಅವರಿಗೆ ಆಭಾರಿಯಾಗಿದ್ದೇನೆ. ಅವರು ಹೇಳಿರುವುದರಲ್ಲಿ ಕೆಲವೊಂದು ನನಗೆ ಅರ್ಥವಾಗಿದೆ. ಇಂದು ಬಿಜೆಪಿ ಸಂಕಲ್ಪ ಪತ್ರ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ. ತಾಯಿ ಚಾಮುಂಡೇಶ್ವರಿಯ ದೇವಿಯ ಆಶೀರ್ವಾದ ಪಡೆಯುವ ಅವಕಾಶ ಸಿಕ್ಕಿದೆ ಎಂದು ಹೇಳಿದ್ದಾರೆ.
ದೇವೇಗೌಡರು ಕೂಡ ಗ್ಯಾರಂಟಿ ಬಗ್ಗೆ ಹೇಳಿದ್ದಾರೆ ಎಂದು ಕಾಂಗ್ರೆಸ್ ಗ್ಯಾರಂಟಿಗೆ ಪ್ರಧಾನಿ ಮೋದಿ ಕೌಂಟರ್ ಕೊಟ್ಟಿದ್ದಾರೆ. ಮೋದಿ ಗ್ಯಾರಂಟಿ ದೇಶದ ಜನರಿಗೆ ಸಹಕಾರಿಯಾಗಿದೆ. ಕರ್ನಾಟಕದ ಮಾತೆಯರ ಉಪಸ್ಥಿತಿಯೇ ಎಲ್ಲವನ್ನು ಹೇಳುತ್ತಿದೆ. ಮತ್ತೊಮ್ಮೆ ಮೋದಿ ಸರ್ಕಾರ ಎಂಬುದನ್ನು ಕರ್ನಾಟಕ ಜನರ ಮನಸ್ಸು ಹೇಳುತ್ತಿದೆ ಎಂದು ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ದೇಶದಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ. ಕರ್ನಾಟಕ ಐಟಿ ಮತ್ತು ತಂತ್ರಜ್ಞಾನದ ಹಬ್ ಆಗಿದೆ. 10 ವರ್ಷಗಳ ಹಿಂದೆ ಭಾರತ ಬೇರೆ ದೇಶಗಳ ಮೇಲೆ ಅವಲಂಬನೆ ಹೊಂದಿತ್ತು. ಈಗ ತಂತ್ರಜ್ಞಾನದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಬಡವರಿಗೆ ಮೂರು ಕೋಟಿ ಮನೆಗಳನ್ನು ನಿರ್ಮಾಣ ಮಾಡಲಾಗುವುದು. ಭಾರತದ ಅಭಿವೃದ್ಧಿ ಜಗತ್ತನ್ನು ಚಕಿತಗೊಳಿಸುತ್ತಿದೆ. ಚಂದ್ರಯಾನ, ಸೆಮಿಕಂಡಕ್ಟರ್ ಮೂಲಕ ಸಾಧನೆ ಮಾಡುತ್ತಿದೆ ಎಂದರು,
ದೇಶದಲ್ಲಿ ಕಡಿಮೆ ಬೆಲೆಗೆ ಔಷಧಿಗಳು ಸಿಗುವಂತೆ ಮಾಡಿದ್ದೇವೆ. ಕನ್ನಡ ಭಾಷೆ ಬಹಳ ವಿಸ್ತಾರವಾಗಿ ಬೆಳೆಯಲಿದೆ. ಹಿರಿಯರಿಗೆ ಆಯುಷ್ಮಾನ್ ಯೋಜನೆಯಡಿ ಚಿಕಿತ್ಸೆ ದೊರೆಯಲಿದೆ. 5 ವರ್ಷ ಉಚಿತ ಪಡಿತರ ನೀಡಲಾಗುವುದು. ಡಿಜಿಟಲ್ ಇಂಡಿಯಾ ನಮ್ಮ ಜೀವನ ಮುಂದೆ ತಂದಿದೆ. ಕರ್ನಾಟಕ ವಿಕಾಸಕ್ಕೆ ಸಾಕಷ್ಟು ಕೆಲಸದ ಅವಶ್ಯಕತೆ ಇದೆ. ಅನುಭವಿಗಳಾದ ಯಡಿಯೂರಪ್ಪ, ಕುಮಾರಸ್ವಾಮಿ ನೇತೃತ್ವದಲ್ಲಿ ಕರ್ನಾಟಕ ಪ್ರಗತಿ ಹೊಂದಲಿದೆ ಎಂದು ಹೇಳಿದ್ದಾರೆ.