ನವದೆಹಲಿ : ಡಿಸಿಎಂ ಡಿಕೆ ಶಿವಕುಮಾರ್ ಅವರು ಇಂದು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಮಹತ್ವದ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದರು.
ಮೋದಿ ಭೇಟಿಯಾದ ಡಿಸಿಎಂ ಡಿಕೆಶಿ ಕರ್ನಾಟಕದಲ್ಲಿ ಬಾಕಿ ಇರುವ ಯೋಜನೆಗಳಿಗೆ ಕೇಂದ್ರದ ಅನುಮತಿಯನ್ನು ಕೋರಿದರು. ನಮ್ಮ ಚರ್ಚೆಯ ಸಮಯದಲ್ಲಿ, ಕರ್ನಾಟಕದ ಆರ್ಥಿಕತೆ ಮತ್ತು ಸಾರ್ವಜನಿಕ ಕಲ್ಯಾಣವನ್ನು ಬಲಪಡಿಸಲು ಈ ಅನುಮತಿಯ ಮಹತ್ವವನ್ನು ಎತ್ತಿ ತೋರಿಸಲಾಯಿತು, ಇದು ಅಂತಿಮವಾಗಿ ಜಿಡಿಪಿಗೆ ನಮ್ಮ ಕೊಡುಗೆಯ ಬಗ್ಗೆ ಸಕಾರಾತ್ಮಕವಾಗಿ ಪ್ರತಿಬಿಂಬಿಸುತ್ತದೆ ಎಂದರು.
ಸುರಂಗ ರಸ್ತೆ, ಸಿಗ್ನಲ್ ಮುಕ್ತ ರಸ್ತೆ, ಪ್ರಮುಖ ರಸ್ತೆಗಳು ಹಾಗೂ ನೀರಾವರಿಗೆ ಹೆಚ್ಚಿನ ಅನುದಾನ ನೀಡುವಂತೆ ಪ್ರಧಾನಿ ಮೋದಿ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದರು. ಬೆಂಗಳೂರಿಗೆ ಬಜೆಟ್ನಲ್ಲಿ ಏನೂ ದೊರೆತಿಲ್ಲ. ಬೆಂಗಳೂರು ಅಭಿವೃದ್ದಿಗೆ ಅನುದಾನ ನೀಡಬೇಕು ಎಂದು ಮನವಿ ಮಾಡಲಾಗಿದೆ ಎಂದರು.
ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಜೆಎನ್ ನರ್ಮ್ ಯೋಜನೆ ಅಡಿ ಎಲೆಕ್ಟ್ರಾನಿಕ್ ಸಿಟಿ, ಹೆಬ್ಬಾಳ, ನೆಲಮಂಗಲ ಮೇಲ್ಸೇತುವೆ ನಿರ್ಮಾಣಕ್ಕೆ ಅನುದಾನ ನೀಡಲಾಗಿತ್ತು ಎಂದರು. 5300 ಕೋಟಿ ರೂ. ಬಜೆಟ್ನ ಭದ್ರಾ ಮೇಲ್ಡಂಡೆ ಯೋಜನೆಯ ಹಣ ಬಂದಿಲ್ಲ. ಅದನ್ನು ಪರಿಶೀಲಿಸುವ ಬಗ್ಗೆ ಪ್ರಧಾನಿ ಭರವಸೆ ನೀಡಿದ್ದಾರೆ ಎಂದರು.