ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ್ದ ಭಾರತೀಯ ಒಲಿಂಪಿಕ್ಸ್ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ತಮ್ಮ ನಿವಾಸದಲ್ಲಿ ಭೇಟಿ ಮಾಡಿದ್ದಾರೆ.
ಪ್ರಧಾನಮಂತ್ರಿ ಅವರು ಪದಕ ಪುರಸ್ಕೃತ ಕ್ರೀಡಾಪಟುಗಳೊಂದಿಗೆ ಸಂವಾದ ನಡೆಸಿದ್ದಾರೆ. ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಡಾ. ಮನ್ಸುಖ್ ಮಾಂಡವಿಯಾ ಮತ್ತು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷೆ ಪಿ.ಟಿ. ಉಷಾ ಅವರು ಪ್ರಧಾನ ಮಂತ್ರಿಯವರ ನಿವಾಸದಲ್ಲಿ ನಡೆದ ಸಂವಾದದಲ್ಲಿ ಉಪಸ್ಥಿತರಿದ್ದರು.
ಭಾರತದ ಅಥ್ಲೀಟ್‌ಗಳು ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ತಮ್ಮ ಅಭಿಯಾನದ ಸಮಯದಲ್ಲಿ ಒಟ್ಟು ಆರು ಪದಕಗಳನ್ನು ಪಡೆದ್ದಾರೆ. ಮನು ಭಾಕರ್, ಸರಬ್ಜೋತ್ ಸಿಂಗ್, ಸ್ವಪ್ನಿಲ್ ಕುಸಾಲೆ, ನೀರಜ್ ಚೋಪ್ರಾ ಮತ್ತು ಭಾರತೀಯ ಪುರುಷರ ಹಾಕಿ ತಂಡ ಪದಕಗಳನ್ನು ಗೆದ್ದಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ನಮ್ಮ ರಾಷ್ಟ್ರವನ್ನು ಪ್ರತಿನಿಧಿಸಿದ ಭಾರತೀಯ ಸ್ಪರ್ಧಿಗಳ ಜೊತೆ ಮಾತನಾಡಿ ಅವರ ಆಟಗಳ ಅನುಭವ ಕೇಳಿದ ಮೋದಿ ಕ್ರೀಡಾ ಕ್ಷೇತ್ರದಲ್ಲಿ ಅವರ ಸಾಧನೆಗಳ ಬಗ್ಗೆ ಶ್ಲಾಘಿಸಿದ್ದಾರೆ.
ಪ್ಯಾರಿಸ್ ಗೆ ಹೋದ ಪ್ರತಿಯೊಬ್ಬ ಆಟಗಾರರೂ ಚಾಂಪಿಯನ್ ಆಗಿದ್ದಾರೆ. ಭಾರತ ಸರ್ಕಾರವು ಕ್ರೀಡೆಗಳಿಗೆ ಬೆಂಬಲ ನೀಡುವುದನ್ನು ಮುಂದುವರಿಸುತ್ತದೆ. ಉನ್ನತ ಗುಣಮಟ್ಟದ ಕ್ರೀಡಾ ಮೂಲಸೌಕರ್ಯವನ್ನು ಕಲ್ಪಿಸಲಾಗಿದೆ ಎಂದು ಮೋದಿ ತಿಳಿಸಿದ್ದಾರೆ.