ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸಂಪುಟ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿಗೊಳಿಸುವ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಸುಪ್ರೀಂಕೋರ್ಟ್, ಕೊರೊನಾ ಟಾಸ್ಕ್ ಫೋರ್ಸ್, ಅಮೆರಿಕ ಅಧ್ಯಕ್ಷರ ವೈದ್ಯಕೀಯ ಸಲಹೆಗಾರರು ಹಾಗೂ ಅನೇಕ ಆರೋಗ್ಯ, ವೈದ್ಯಕೀಯ ಕ್ಷೇತ್ರದ ದಿಗ್ಗಜರು, ವಿರೋಧ ಪಕ್ಷಗಳು ದೇಶದಲ್ಲಿ ಲಾಕ್ಡೌನ್ ಮಾಡುವಂತೆ ಸಲಹೆ ನೀಡಿವೆ. ದೇಶದಲ್ಲಿ ಕೊರೋನಾ ಪರಿಸ್ಥಿತಿ ಕೈಮೀರಿದ ಹಿನ್ನೆಲೆಯಲ್ಲಿ ಅನೇಕ ರಾಜ್ಯಗಳಲ್ಲಿ ಕರ್ಫ್ಯೂ, ಲಾಕ್ಡೌನ್ ನಂತಹ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಆದರೂ, ಸೋಂಕು ನಿಯಂತ್ರಣಕ್ಕೆ ಬಾರದ ಕಾರಣ ಕಳೆದ ವರ್ಷ ಜಾರಿಗೊಳಿಸಿದಂತೆ ದೇಶಾದ್ಯಂತ ಲಾಕ್ ಡೌನ್ ಜಾರಿ ಮಾಡುವ ಸಾಧ್ಯತೆ ಇದೆ.
ಪ್ರಧಾನಿ ನರೇಂದ್ರ ಮೋದಿ ಅವರು ಲಾಕ್ಡೌನ್ ಕೊನೆಯ ಅಸ್ತ್ರ ಎಂದು ಹೇಳಿದ್ದು, ಅದನ್ನು ಬಳಸಲು ಮುಂದಾಗಿದ್ದಾರೆ. ಲಾಕ್ ಡೌನ್ ಜಾರಿಗೆ ಒತ್ತಡ ಕೇಳಿ ಬಂದ ಹಿನ್ನಲೆಯಲ್ಲಿ ಇಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದು, ಇಂದು ರಾತ್ರಿಯಿಂದಲೇ ದೇಶಾದ್ಯಂತ ಜಾರಿ ಮಾಡುವ ಪ್ರಧಾನಿ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.