ಬಳ್ಳಾರಿ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ನೈರುತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ಬಳ್ಳಾರಿ ರೈಲ್ವೆ ಸೇರಿದಂತೆ ಭಾರತೀಯ ರೈಲ್ವೆಯ 508 ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಪ್ರಧಾನಿಯವರು ಭಾನುವಾರದಂದು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದರು.
ಭಾರತೀಯ ರೈಲ್ವೆಯು ಅತ್ಯಾಧುನಿಕ ಸಾರ್ವಜನಿಕ ಸಾರಿಗೆಯನ್ನು ಒದಗಿಸುವುದಕ್ಕೆ ಒತ್ತು ನೀಡುತ್ತಿದೆ. ರೈಲು ನಿಲ್ದಾಣಗಳಲ್ಲಿ ವಿಶ್ವದರ್ಜೆಯ ಸೌಕರ್ಯಗಳನ್ನು ಒದಗಿಸಲು ಒತ್ತು ನೀಡಲಾಗುತ್ತಿದೆ ಎಂದು ಪ್ರಧಾನಿಯವರು ಹೇಳಿದರು.
ನಗರದ ಪಾರಂಪರಿಕ ಕಟ್ಟಡವಾದ ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿ ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ನೈರುತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ಬಳ್ಳಾರಿ ರೈಲ್ವೆ ನಿಲ್ದಾಣಕ್ಕೆ ಭಾನುವಾರ ವೇದಿಕೆ ಕಾರ್ಯಕ್ರಮದಲ್ಲಿ ಸಂಸದರಾದ ದೇವೇಂದ್ರಪ್ಪ, ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಂಸದ ದೇವೇಂದ್ರಪ್ಪ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಬಳ್ಳಾರಿ ರೈಲ್ವೆ ನಿಲ್ದಾಣ, ರೈಲ್ವೆ ಸಂಪರ್ಕ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತರುವ ಪ್ರಯತ್ನ ಮಾಡುವೆ ಎಂದರು. ಸುಧಾ ಕ್ರಾಸ್ ಫ್ಲೈ ಓವರ್ ನಿರ್ಮಾಣ ಕಾಮಗಾರಿ ಟೆಂಡರ್ ಹಂತದಲ್ಲಿ ಇದೆ ಆದಷ್ಟು ಬೇಗ ಫ್ಲೈ ಓವರ್ ನಿರ್ಮಾಣ ಮಾಡುವುದಾಗಿ ತಿಳಿಸಿದರು.
ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಮಾತನಾಡಿ, ಬಳ್ಳಾರಿ ರೈಲ್ವೆ ನಿಲ್ದಾಣಕ್ಕೆ 150 ವರ್ಷಗಳ ಇತಿಹಾಸ ಇದೆ. ಗಾಂಧೀಜಿ ಅವರು ಸ್ವಾತಂತ್ರ್ಯ ಹೋರಾಟಗಾರರನ್ನು ಹುರಿದುಂಬಿಸುವ ಸಲುವಾಗಿ ರೈಲ್ವೆ ನಿಲ್ದಾಣದಲ್ಲಿ ಸುಮಾರು 8 ಗಂಟೆಗಳ ಕಾಲ ವಾಸ್ತವ್ಯ ಹೂಡಿದ್ದರು. ಇಂತಹ ರೈಲು ನಿಲ್ದಾಣ ಅಭಿವೃದ್ಧಿ ಮಾಡಬೇಕಾಗಿದೆ ಎಂದರು.
ರೈಲ್ವೆ ಜೋನ್ ಅಭಿವೃದ್ಧಿ ಪಡಿಸಲು ಅನುಮತಿ ಬೇಕಾಗುತ್ತದೆ, ಅನುಮತಿ ಬೇಗ ಬಂದರೆ ರಾಜ್ಯ ಸರ್ಕಾರದಿಂದ ಜೋನ್ ಅಭಿವೃದ್ಧಿ ಪಡಿಸುವುದಾಗಿ ತಿಳಿಸಿದರು. ಇದಕ್ಕೆ ರಾಜ್ಯ ಸರ್ಕಾರದಿಂದ ಬೇಕಾದ ಸೌಲಭ್ಯ ನೀಡುತ್ತೇವೆ ಎಂದರು.