ನವದೆಹಲಿ: ಜೆ.ಎನ್.ಯು.ನಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಅನಾವರಣ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರ ಪ್ರತಿಮೆ ಏಕತೆಗೆ ಪ್ರೇರಣೆಯಾಗಿದೆ. ವಿವೇಕಾನಂದರು ದೇಶದ ಸಂಸ್ಕೃತಿಯ ಪ್ರತೀಕವಾಗಿದ್ದಾರೆ. ಆತ್ಮ ನಿರ್ಭರ್ ಭಾರತ 130 ಕೋಟಿ ಜನರ ಕನಸಾಗಿದೆ. 21 ನೇ ಶತಮಾನ ಭಾರತೀಯರ ಶತಮಾನವಾಗಿದೆ ಎಂದು ಹೇಳಿದ್ದಾರೆ.
ದೇಶದಲ್ಲಿ ಅನ್ನದಾತರ ರಕ್ಷಣೆಗೆ ಅನೇಕ ಯೋಜನೆ ರೂಪಿಸಲಾಗಿದೆ. ಮಾರುಕಟ್ಟೆ ಸುಧಾರಣೆ, ಬೆಂಬಲ ಬೆಲೆಯ ಹೆಚ್ಚಳ, ಕೃಷಿ ಸಮ್ಮಾನ್ ನಿಧಿ ಮೂಲಕ ರೈತರಿಗೆ ನೆರವು ನೀಡಲಾಗುತ್ತಿದೆ. ರೈತರ ಬೆಳೆಗಳಿಗೆ ವಿಮೆ ನೀಡುವ ಮೂಲಕ ಅನುಕೂಲ ಕಲ್ಪಿಸಲಾಗಿದೆ. ಕೃಷಿಯ ಸುಧಾರಣೆಯಿಂದ ರೈತರಿಗೆ ಅನುಕೂಲವಾಗಿದೆ. ಕಳೆದ ಆರು ವರ್ಷದಲ್ಲಿ ರೈತರಿಗೆ ಎಲ್ಲ ರೀತಿಯ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಹೊಸ ಶಿಕ್ಷಣ ನೀತಿಯಿಂದ ನವಭಾರತದ ಸಂಕಲ್ಪ ಹೊಂದಲಾಗಿದೆ ಎಂದು ಹೊಸ ಶಿಕ್ಷಣ ನೀತಿ ಬಗ್ಗೆ ಪ್ರಧಾನಿ ಮೋದಿ ವ್ಯಾಖ್ಯಾನಿಸಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ಶಿಕ್ಷಣ ನೀತಿ ನಾಂದಿ ಹಾಡಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.