ನವದೆಹಲಿ: ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ದೆಹಲಿ ಕೆಂಪುಕೋಟೆ ಮೇಲೆ ಧ್ವಜಾರೋಹಣಕ್ಕೆ ಮುನ್ನ ರಾಜ್ ಘಾಟ್ ಗೆ ತೆರಳಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದ್ದಾರೆ.
ರಾಜ್ ಘಾಟ್ ಗೆ ಆಗಮಿಸಿದ ಮೋದಿ ಗಾಂಧೀಜಿ ಸಮಾಧಿಗೆ ಪುಷ್ಪ ನಮನ ಸಲ್ಲಿಸಿ ಗೌರವಿಸಿದರು. ಬಳಿಕ ಕೆಂಪುಕೋಟೆಯತ್ತ ಪ್ರಯಾಣ ಬೆಳೆಸಿದರು. ಕೆಂಪುಕೋಟೆಗೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಸಚಿವ ಅಜಯ್ ಭಟ್ ಸ್ವಾಗತಿಸಿದರು. ಬಳಿಕ ಮೂರು ಸೇನಾಪಡೆ, ಪೊಲೀಸ್ ತಂಡಗಳಿಂದ ಗೌರವ ವಂದನೆ ಸ್ವೀಕರಿಸಿದರು. ನಂತರ ಧ್ವಜಾರೋಹಣ ನೆರವೇರಿಸಿದರು.
75 ಸ್ವಾತಂತ್ರ್ಯ ಮಹೋತ್ಸವದ ಅಂಗವಾಗಿ ಪ್ರಧಾನಿ ಮೋದಿ ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯಂದು ಆಕರ್ಷಕ ಪೇಟ ಧರಿಸಿ ಧ್ವಜಾರೋಹಣ ನೆರವೇರಿಸುವ ಪ್ರಧಾನಿ ಮೋದಿ ಅವರು ಈ ಬಾರಿ ಆಕರ್ಷಕ ತ್ರಿವರ್ಣದ ಪೇಟ ಧರಿಸಿದ್ದರು.