ನವದೆಹಲಿ: ಕೆಂಪುಕೋಟೆಯ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ ದೇಶದ ಜನತೆಗೆ 75ನೇ ಸ್ವಾತಂತ್ರ್ಯೋತ್ಸವದ ಶುಭಾಶಯ ಹೇಳಿದ್ದಾರೆ.
ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಚಂದ್ರಶೇಖರ ಆಜಾದ್, ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಲಕ್ಷ್ಮೀಬಾಯಿ, ನೆಹರೂ, ಅಂಬೇಡ್ಕರ್, ವಲ್ಲಭ ಭಾಯಿ ಪಟೇಲ್ ಸೇರಿದಂತೆ ಹಲವು ಮಹನೀಯರನ್ನು ಸ್ಮರಿಸಿದ್ದಾರೆ. ಇಂತಹ ಮಹಾನ್ ನಾಯಕರು ದೇಶವನ್ನು ನಿರ್ಮಿಸಿ ಮುನ್ನಡೆಸಿದ್ದಾರೆ. ಗುಲಾಮಗಿರಿಯಿಂದ ದೇಶವನ್ನು ಮುಕ್ತಗೊಳಿಸಿದ್ದಾರೆ. ಇಂದು ಶತಮಾನಗಳ ಸಂಘರ್ಷದಲ್ಲಿ ಭಾಗಿಯಾದವರಿಗೆ ಗೌರವ ಸಲ್ಲಿಸಬೇಕಿದೆ ಎಂದು ಮೋದಿ ಹೇಳಿದ್ದಾರೆ.
ಕೊರೊನಾ ವಿರುದ್ಧ ಹೋರಾಡಿದ ಎಲ್ಲ ವಾರಿಯರ್ಸ್ ಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಕೊರೋನಾ ವಾರಿಯರ್ಸ್ ಗಳು ಸೇವಾಭಾವದಿಂದ ಕೆಲಸ ಮಾಡಿದ್ದಾರೆ. ನಮ್ಮೆಲ್ಲರ ಗೌರವವಂದನೆ ಅವರಿಗೆ ಸಲ್ಲಿಸಬೇಕು. ದೇಶದ ಹಲವೆಡೆ ಪ್ರವಾಹ ಪರಿಸ್ಥಿತಿ ಇದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೇಶದ ಜನರ ಜೊತೆಗೆ ಇವೆ. ಒಲಿಂಪಿಕ್ಸ್ ನಲ್ಲಿ ಕ್ರೀಡಾಪಟುಗಳು ಸಾಧನೆ ಮಾಡಿದ್ದಾರೆ. ಈ ಎಲ್ಲಾ ಕ್ರೀಡಾಪಟುಗಳಿಗೆ ಗೌರವ ನೀಡುವುದು ನಮ್ಮ ಆದ್ಯತೆಯಾಗಬೇಕು. ಒಲಂಪಿಕ್ಸ್ ಕ್ರೀಡಾಪಟುಗಳನ್ನು ಚಪ್ಪಾಳೆ ತಟ್ಟಿ ಸನ್ಮಾನಿಸಿ ಎಂದು ದೇಶದ ಜನತೆಗೆ ಮೋದಿ ಕರೆ ನೀಡಿದ್ದಾರೆ.