ಕನ್ನಡ ಭಾಷೆ ಸಂಸ್ಕೃತಿಯನ್ನು ಭಾರತದಾತ್ಯಂತ ಗೌರವಿಸಲಾಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಗುಜರಾತ್ ನ ಅಹ್ಮದಾಬಾದ್ ನಲ್ಲಿ ಕನ್ನಡ ಸಂಘದ 75 ವಾರ್ಷಿಕೋತ್ಸವದಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಭಾಗಿಯಾಗಿದ್ದ ಬಗ್ಗೆ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ.
ದೇಶ ಸ್ವಾತಂತ್ರ್ಯದ ಅಮೃತಮಹೋತ್ಸವ ಸಂಭ್ರಮದಲ್ಲಿದೆ. ಗುಜರಾತ್ ಅಹಮದಾಬಾದ್ ಕನ್ನಡ ಸಂಘ 75 ನೇ ವರ್ಷದ ಸಂಭ್ರಮದಲ್ಲಿದೆ. ಅಂದಿನ ದಿನಗಳಲ್ಲಿಯೇ ಗುಜರಾತ್ ನಲ್ಲಿ ಕನ್ನಡಿಗರು ಬೆರೆತು ವ್ಯಾಪಾರ ವಹಿವಾಟು ನಡೆಸಿ ಗುಜರಾತ್ ರಾಜ್ಯದ ಏಳಿಗೆಗೆ ಕೊಡುಗೆ ನೀಡಿದ್ದಾರೆ ಎಂದು ಪ್ರಹ್ಲಾದ್ ಜೋಶಿ ಸ್ಮರಿಸಿದ್ದಾರೆ.
ಗುಜರಾತ್ ನ ಅಹ್ಮದಾಬಾದ್ ನಲ್ಲಿ ನಡೆದ ಕನ್ನಡ ಸಂಘದ 75ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮದಲ್ಲಿ ಅತ್ಯಂತ ಸಂತಸದಿಂದ ಪಾಲ್ಗೊಂಡು ಗುಜರಾತ್ ಕನ್ನಡಿಗರೊಂದಿಗೆ ಎರಡು ರಾಜ್ಯಗಳು ಹೊಂದಿರುವ ವಿಶೇಷ ಬಾಂಧವ್ಯದ ಕುರಿತು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಇದರ ಬಗ್ಗೆ ಪ್ರಹ್ಲಾದ ಜೋಶಿ ಟ್ವೀಟ್ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿ, ಏಕ ಭಾರತ ಶ್ರೇಷ್ಠ ಭಾರತ, ಇಂತಹ ಸಾಂಸ್ಕೃತಿಕ ವಿನಿಮಯಗಳು ಉತ್ತೇಜನಕಾರಿಯಾಗಿವೆ. ಕರ್ನಾಟಕದ ಸಂಸ್ಕೃತಿ ಮತ್ತು ಕನ್ನಡ ಭಾಷೆಯನ್ನು ಭಾರತದಾದ್ಯಂತ ವ್ಯಾಪಕವಾಗಿ ಗೌರವಿಸಲಾಗುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.