ಜೈಪುರ: ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರಿಗೆ ಅಯೋಧ್ಯೆಯ ರಾಮಮಂದಿರದ ಪ್ರತಿಕೃತಿಯನ್ನು ಉಡುಗೊರೆಯಾಗಿ ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ.
ಗುರುವಾರ ರಾಜಸ್ಥಾನದ ಜೈಪುರದಲ್ಲಿ ರಾಮಮಂದಿರ ಪ್ರತಿಕೃತಿ ನೀಡಿದರು. ನಾಳೆ ದೆಹಲಿಯಲ್ಲಿ ನಡೆವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮ್ಯಾಕ್ರನ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಜೈಪುರದಲ್ಲಿ ಭಾರಿ ಭದ್ರತಾ ವ್ಯವಸ್ಥೆಗಳ ನಡುವೆ ಪ್ರಧಾನಿ ಮೋದಿ ಮತ್ತು ಮ್ಯಾಕ್ರನ್ ಜಂಟಿ ರೋಡ್ ಶೋ ನಡೆಸಿದರು. ಜಂತರ್ ಮಂತರ್ನಲ್ಲಿ ಆರಂಭವಾದ ರೋಡ್ಶೋ ಹವಾ ಮಹಲ್ನಲ್ಲಿ ಕೊನೆಗೊಂಡಿತು. ತೆರೆದ ವಾಹನದಲ್ಲಿ ತೆರಳುತ್ತಿದ್ದ ಇಬ್ಬರು ನಾಯಕರು ರಸ್ತೆಬದಿಯಲ್ಲಿ ನೆರೆದಿದ್ದ ಜನರತ್ತ ಕೈ ಬೀಸಿದರು.
ಇಂದು ಮಧ್ಯಾಹ್ನ ಜೈಪುರಕ್ಕೆ ಆಗಮಿಸಿದ ಮ್ಯಾಕ್ರನ್ ಸೈವಿವಿಧ ಸ್ಥಳಗಳಿಗೆ ಭೇಟಿ ನೀಡಿದ್ದರು. ಬೆಟ್ಟದ ಮೇಲಿನ ಅಂಬರ್ ಅರಮನೆ ಸೇರಿದಂತೆ ಜೈಪುರದ ಸಾಂಪ್ರದಾಯಿಕ ತಾಣಗಳಿಗೆ ಭೇಟಿ ನೀಡಿದರು. ಅರಮನೆಯಲ್ಲಿ, ಮ್ಯಾಕ್ರನ್ ಭಾರತ-ಫ್ರಾನ್ಸ್ ಸ್ನೇಹವನ್ನು ಎತ್ತಿ ತೋರಿಸುವ ಫಲಕಗಳನ್ನು ಹಿಡಿದು ಮಕ್ಕಳೊಂದಿಗೆ ಸಂವಾದ ನಡೆಸಿದರು. ಅಧ್ಯಕ್ಷ ಮ್ಯಾಕ್ರನ್ ಸೇರಿದಂತೆ ಫ್ರೆಂಚ್ ನಿಯೋಗವನ್ನು ರಾಜಸ್ಥಾನದ ರಾಜ್ಯಪಾಲ ಕಲ್ರಾಜ್ ಮಿಶ್ರಾ ಮತ್ತು ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಜೈಪುರ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು.
ಜೈಪುರದ ರಾಮ್ಬಾಗ್ ಪ್ಯಾಲೇಸ್ ಹೋಟೆಲ್ನಲ್ಲಿ ಪ್ರಧಾನಿ ಮೋದಿ ಮತ್ತು ಮ್ಯಾಕ್ರನ್ ಭಾರತ-ಫ್ರಾನ್ಸ್ ಬಾಂಧವ್ಯವನ್ನು ಬಲಪಡಿಸುವ ಕುರಿತು ಚರ್ಚೆ ನಡೆಸಲಿದ್ದಾರೆ. ಮಾತುಕತೆ ಬಳಿಕ ಉಭಯ ನಾಯಕರು ನವದೆಹಲಿಗೆ ತೆರಳಲಿದ್ದಾರೆ. ಶುಕ್ರವಾರ ದೆಹಲಿಯ ಕರ್ತವ್ಯ ಪಥದಲ್ಲಿ ಮ್ಯಾಕ್ರನ್ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.