ಮುಂಬೈ: ಉದ್ಯಮಿ ಅದಾನಿ ವಿರುದ್ಧದ ಆರೋಪಗಳ ಬಗ್ಗೆ ತನಿಖೆಗೆ ಜಂಟಿ ಸದನ ಸಮಿತಿ ರಚಿಸುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.
ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆಸಿದ ರಾಹುಲ್ ಗಾಂಧಿ, ಉದ್ಯಮಿ ಅದಾನಿ ಬಗ್ಗೆ ಮಾಧ್ಯಮಗಳ ವರದಿ ಪ್ರಸ್ತಾಪಿಸಿ ವಾಗ್ದಾಳಿ ನಡೆಸಿ ತನಿಖೆಗೆ ಜಂಟಿ ಸದನ ಸಮಿತಿ ರಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರಾಹುಲ್ ಗಾಂಧಿ ಚೀನಾದ ಪ್ರಜೆ ಭಾರತದ ಶೇರು ಮಾರುಕಟ್ಟೆಯಲ್ಲಿ ಏಕೆ ಹೂಡಿಕೆ ಮಾಡುತ್ತಿದ್ದಾರೆ. ಗೌತಮ್ ಅದಾನಿ ವಿಚಾರದಲ್ಲಿ ಪ್ರಧಾನಿ ಮೋದಿ ಏಕೆ ಮೌನ ವಹಿಸಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಅದಾನಿ ವಿಚಾರದಲ್ಲಿ ಪ್ರಧಾನಿ ಮೋದಿ ಆತಂಕಗೊಂಡಿದ್ದಾರೆ. ಮಾರಿಷಸ್ ಮೂಲದ ಅಪಾರದರ್ಶಕ ಹೂಡಿಕೆ ನಿಧಿಗಳ ಮೂಲಕ ಅದಾನಿ ಕುಟುಂಬದ ಸಹವರ್ತಿಗಳು ಕಂಪನಿಯಲ್ಲಿ ನೂರಾರು ಮಿಲಿಯನ್ ಹೂಡಿಕೆ ಮಾಡಿದ್ದಾರೆ ಎಂಬ ವರದಿಗಳ ಬಗ್ಗೆ ಜಂಟಿ ಸಂಸದೀಯ ಸಮಿತಿ(ಜೆಪಿಸಿ) ತನಿಖೆ ನಡೆಸಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಪ್ರಮುಖ ಜಾಗತಿಕ ಹಣಕಾಸು ಪತ್ರಿಕೆಗಳು ಅದಾನಿ ವಿಷಯದ ಬಗ್ಗೆ ಬಹಳ ಮುಖ್ಯವಾದ ಪ್ರಶ್ನೆಗಳನ್ನು ಎತ್ತಿವೆ ಎಂದು ರಾಹುಲ್ ಗಾಂಧಿ ಪತ್ರಿಕೆಗಳ ಪ್ರತಿಗಳನ್ನು ಪ್ರದರ್ಶಿಸಿದ್ದು, ಅದಾನಿ ವಿಚಾರದಲ್ಲಿ ಸಮಗ್ರ ತನಿಖೆ ನಡೆಯಬೇಕು. ಪ್ರಧಾನಿ ಮೋದಿ ಏಕೆ ಮೌನವಾಗಿದ್ದಾರೆ? ಅವರು ಇದನ್ನು ಏಕೆ ತನಿಖೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.