ನವದೆಹಲಿ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಾಗೂ ಪಶ್ಚಿಮ ಬಂಗಾಳದ ಖ್ಯಾತ ನೇಕಾರ ಬಿರೇನ್ ಕುಮಾರ್ ಬಸಾಕ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅವರ ಪೇಂಟಿಂಗ್ ಇರುವ ವಿಶೇಷ ಸೀರೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.
ಟ್ವಿಟ್ಟರ್ ನಲ್ಲಿ ತಮಗೆ ಉಡುಗೊರೆ ನೀಡಿದ ಕ್ಷಣದ ಫೋಟೋವನ್ನು ಹಂಚಿಕೊಂಡ ಪ್ರಧಾನಿ ಮೋದಿ, ನೇಕಾರ ಬಿರೇನ್ ಕುಮಾರ್ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಹೆಸರಾಂತ ನೇಕಾರರಾಗಿರುವ ಪಶ್ಚಿಮ ಬಂಗಾಳದ ಬಿರೇನ್ ಕುಮಾರ್ ಬಸಾಕ್, ತಾವು ತಯಾರಿಸುವ ಸೀರೆಗಳಲ್ಲಿ ಭಾರತೀಯ ಇತಿಹಾಸ ಹಾಗೂ ಸಂಸ್ಕೃತಿಯ ವಿವಿಧ ಅಂಶಗಳನ್ನು ಚಿತ್ರಿಸುತ್ತಾರೆ. ಪದ್ಮ ಪ್ರಶಸ್ತಿ ಪುರಸ್ಕೃತರೊಂದಿಗಿನ ಸಂವಾದದ ವೇಳೆ ಈ ಸೀರೆಯನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಫೋಟೋ ಸಹಿತ ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಇನ್ನು ಬಿರೇನ್ ಕುಮಾರ್ ಬಸಕ್, ಇಂದು 25 ಕೋಟಿ ರೂ.ಗಳ ವಹಿವಾಟು ನಡೆಸುತ್ತಿದ್ದಾರೆ. ಆದ್ರೆ ತನ್ನ ಗತವೈಭವವನ್ನು ಅವರು ಇಂದಿಗೂ ಮರೆತಿಲ್ಲ. ಬಿರೇನ್ ಕುಮಾರ್ ಅವರು 1970 ರ ದಶಕದಲ್ಲಿ ತಮ್ಮ ಸಹೋದರನೊಂದಿಗೆ ಸೀರೆಗಳನ್ನು ಮಾರಾಟ ಮಾಡಲು ಕೋಲ್ಕತ್ತಾದಲ್ಲಿ ಮನೆ-ಮನೆಗೆ ಹೋಗುತ್ತಿದ್ದರು. 1 ರೂಪಾಯಿಯಿಂದ ತಮ್ಮ ವ್ಯಾಪಾರ ಶುರು ಮಾಡಿದ ಅವರು ಇಂದು ಕೋಟಿ-ಕೋಟಿ ಗಳಿಸುತ್ತಿದ್ದಾರೆ. ಅಲ್ಲದೆ ಕನಿಷ್ಠ 5,000 ನೇಕಾರರಿಗೆ ಉದ್ಯೋಗ ಸೃಷ್ಟಿಸಿದ್ದಾರೆ.