
ಬೆಳಗಾವಿ: ಭಾರತ ಮಾತಾ ಕೀ ಜೈ ಎಂದು ಭಾಷಣ ಆರಂಭಿಸಿದ ಪ್ರಧಾನಿ ಮೋದಿ, ಬೆಳಗಾವಿ ಮತ್ತು ಚಿಕ್ಕೋಡಿ ಸೋದರ, ಸೋದರಿಯರಿಗೆ ನನ್ನ ನಮಸ್ಕಾರಗಳು, ತಾಯಿ ಭುವನೇಶ್ವರಿ, ಸವದತ್ತಿ ಯಲ್ಲಮ್ಮರಿಗೆ ಪ್ರಣಾಮಗಳು ಎಂದು ಕನ್ನಡದಲ್ಲೇ ಮಾತಾಡಿದ್ದಾರೆ.
ಬೆಳಗಾವಿಯಲ್ಲಿ ನಡೆದ ಲೋಕಸಭೆ ಚುನಾವಣೆ ಪ್ರಚಾರದಲ್ಲಿ ಮಾತನಾಡಿದ ಅವರು, ಮೊದಲಿಗೆ ಕರ್ನಾಟಕದ ಮತದಾರರಿಗೆ ಅಭಿನಂದನೆಗಳು. ಮತ್ತೊಮ್ಮೆ ಮೋದಿ ಸರ್ಕಾರ ಎಂಬ ಧ್ವನಿ ಮೊಳಗುತ್ತಿದೆ. ಛತ್ರಪತಿ ಶಿವಾಜಿ ಮಹಾರಾಜರು ಶಕ್ತಿಶಾಲಿ ರಾಷ್ಟ್ರ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಬಸವಣ್ಣನವರು ಅನುಭವ ಮಂಟಪ ಮೂಲಕ ಪ್ರಜಾಪ್ರಭುತ್ವ ಸ್ಥಾಪಿಸಿದ್ದರು ಎಂದು ಹೇಳಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದಗಾಲೆಲ್ಲ ಕಾನೂನು ಅಧೋಗತಿಗೆ ಇಳಿದಿದೆ. ನಾವು ಕಾನೂನು ಸರಿ ಮಾಡಿ ದೇಶ ಕಟ್ಟುವ ಕೆಲಸ ಮಾಡುತ್ತಿದ್ದೇವೆ ಎಂದರು. ಹುಬ್ಬಳ್ಳಿ ನೇಹಾ ಕೇಸ್ ಪ್ರಸ್ತಾಪಿಸಿದ ಪ್ರಧಾನಿ ಮೋದಿ, ತುಷ್ಠೀಕರಣದಿಂದ ಕೊಲೆ, ಗಲಭೆ ನಡೆಯುತ್ತಿವೆ. ಬೆಂಗಳೂರಿನಲ್ಲಿ ಕೆಫೆ ಸ್ಪೋಟ ಸಂಭವಿಸುತ್ತಿದೆ. ಬಾಂಬ್ ಸ್ಪೋಟವನ್ನು ಸಿಲಿಂಡರ್ ಸ್ಪೋಟ ಎಂದು ಹೇಳಿದ್ದರು. ಕಾಂಗ್ರೆಸ್ ನವರದು ವೋಟ್ ಬ್ಯಾಂಕ್ ರಾಜಕಾರಣವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಕಾನೂನು ಅದೋಗತಿಗೆ ಇಳಿದಿದ್ದು, ಕೊಲೆ ಗಲಭೆಗಳು ಹೆಚ್ಚಾಗುತ್ತಿವೆ. ಕರ್ನಾಟಕದಲ್ಲಿ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದಿದ್ದಾರೆ.
ಬಿಜೆಪಿ ಸರ್ಕಾರದಿಂದ ಭಾರತ ಮುನ್ನಡೆಯುತ್ತ ಸಾಗುತ್ತಿದೆ. ಹಿಂದುಸ್ಥಾನದ ಆತ್ಮವಿಶ್ವಾಸ ಹೆಚ್ಚಿಸುವಂತೆ ಮಾಡಲಾಗಿದೆ. ಶಕ್ತಿಶಾಲಿ ಭಾರತ ನಿರ್ಮಾಣಕ್ಕೆ ಪಣತೊಟ್ಟಿದ್ದೇವೆ. ಕೋವಿಡ್ ವೇಳೆ ಕಾಂಗ್ರೆಸ್ ಸುಳ್ಳು ಸುದ್ದಿ ಹರಡಿತ್ತು. ಈಗ ಇವಿಎಂ ಮೇಲೆಯೂ ಕಾಂಗ್ರೆಸ್ ಗೆ ಭರವಸೆ ಇರಲಿಲ್ಲ. ಎರಡು ದಿನದ ಹಿಂದೆ ಸುಪ್ರೀಂ ಕೋರ್ಟ್ ಕಾಂಗ್ರೆಸ್ ನವರಿಗೆ ಚಾಟಿ ಬೀಸಿದೆ ಎಂದಿದ್ದಾರೆ.
ವ್ಯಾಕ್ಸಿನ್ ಮೇಲೆಯೂ ಅವರಿಗೆ ಭರವಸೆ ಇರಲಿಲ್ಲ. ಅದು ಬಿಜೆಪಿಯ ವ್ಯಾಕ್ಸಿನ್ ಎಂದು ಟೀಕಿಸಿದ್ದರು. ವಿರೋಧ ವ್ಯಕ್ತಪಡಿಸಿದ್ದರು, ಸುಳ್ಳು ಹೇಳಿದ್ದರು. ಕಾಂಗ್ರೆಸ್ ಕೆಟ್ಟ ಮನಸ್ಥಿತಿ ಹೊಂದಿದೆ. ವಿದೇಶದಲ್ಲಿಯೂ ಅಪಪ್ರಚಾರ ಮಾಡಿದ್ದರು ಎಂದರು.