ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆಗೆಂದು ಕೇರಳದ ಕೊಚ್ಚಿಗೆ ಆಗಮಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸ್ವಾಗತಿಸಿದ್ದಾರೆ.
ಭಾರತೀಯ ನೌಕಾ ಪಡೆಯ ವೈಮಾನಿಕ ನಿಲ್ದಾಣ ಗರುಡಾದಿಂದ ಎರಡು ಕಿ.ಮೀ. ದೂರದ ರೋಡ್ ಶೋನಲ್ಲಿ ಭಾಗಿಯಾದ ಮೋದಿ, ಈ ವೇಳೆ ಕೇರಳದ ಸಾಂಪ್ರದಾಯಿಕ ಧಿರಿಸಿನಲ್ಲಿ ಮಿಂಚಿದ್ದಾರೆ. ಶಾಲು ಹಾಗೂ ಕುರ್ತಾದಲ್ಲಿ ಕಂಗೊಳಿಸುತ್ತಿರುವ ಮೋದಿ ತಮ್ಮನ್ನು ನೋಡಲು ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಅಭಿಮಾನಿಗಳತ್ತ ಕೈ ಬೀಸುತ್ತಾ ಠೀವಿಯಲ್ಲಿ ಸಾಗಿದ್ದಾರೆ.
ಪ್ರಧಾನಿಗೆ ಹಾದಿಯದ್ದಕ್ಕೂ ಹೂವಿನ ಮಳೆಗರೆಯುವ ಮೂಲಕ ಕೊಚ್ಚಿಯ ಸಾರ್ವಜನಿಕರು ಸ್ವಾಗತಿಸಿದ್ದಾರೆ. ಹಾದಿಯುದ್ದಕ್ಕೂ ಸಾವಿರಾರು ಸಂಖ್ಯೆಯಲ್ಲಿ ಭದ್ರತಾ ಪಡೆಯನ್ನು ಪ್ರಧಾನಿ ಭದ್ರತೆಗೆಂದು ನಿಯೋಜಿಸಲಾಗಿತ್ತು.
ಇದೇ ವೇಳೆ, ಕೊಚ್ಚಿಯ ಜಲ ಮೆಟ್ರೋ ಮಾರ್ಗಗಳನ್ನು ಪ್ರಧಾನಿ ಲೋಕಾರ್ಪಣೆ ಮಾಡಿದ್ದಾರೆ. ದೇಶದ 12 ನಗರಗಳಲ್ಲಿ ಮೆಟ್ರೋ ಜಾಲಗಳು ಇದ್ದರೂ ಸಹ ಮೊಟ್ಟ ಮೊದಲ ಬಾರಿಗೆ ಜಲ ಮೆಟ್ರೋ ಜಾಲವನ್ನು ಹೊಂದಿರುವ ಶ್ರೇಯ ಕೊಚ್ಚಿಯದ್ದಾಗಿದೆ.