ನವದೆಹಲಿ: ಭಾನುವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಸ್ವಸ್ಥರಾದ ನಂತರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿದ್ದಾರೆ.
ವಿಧಾನಸಭಾ ಚುನಾವಣೆಯ ಮೂರನೇ ಹಂತದ ಮತದಾನಕ್ಕೆ ಮುನ್ನ ಕಥುವಾದಲ್ಲಿ ನೂರಾರು ಜನರನ್ನುದ್ದೇಶಿಸಿ ಮಾತನಾಡುತ್ತಿದ್ದಾಗ, ಕಾಂಗ್ರೆಸ್ ಅಧ್ಯಕ್ಷ ಖರ್ಗೆ ತಲೆತಿರುಗುವಿಕೆಯಿಂದ ಅಸ್ವಸ್ಥರಾಗಿದ್ದು, ಅವರ ಭದ್ರತಾ ಸಿಬ್ಬಂದಿ ಮತ್ತು ಕಾಂಗ್ರೆಸ್ ನಾಯಕರು ಉಪಚರಿಸಿದ್ದಾರೆ. ನೀರು ಕುಡಿದ ನಂತರ ಖರ್ಗೆ ಮಾತು ಮುಂದುವರಿಸಿದರು.
ಅವರ ಪುತ್ರ, ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಅವರು ತಮ್ಮ ತಂದೆಯ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಜಮ್ಮು ಮತ್ತು ಕಾಶ್ಮೀರದ ಜಸ್ರೋಟಾದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುವಾಗ ಸ್ವಲ್ಪ ಅಸ್ವಸ್ಥರಾಗಿದ್ದರು. ಅವರ ವೈದ್ಯಕೀಯ ತಂಡವು ಅವರನ್ನು ಪರೀಕ್ಷಿಸಿದೆ ಮತ್ತು ಸ್ವಲ್ಪ ಕಡಿಮೆ ರಕ್ತದೊತ್ತಡವನ್ನು ಹೊರತುಪಡಿಸಿ, ಅವರು ಚೆನ್ನಾಗಿದ್ದಾರೆ ಎಂದು ತಿಳಿಸಿದ್ದಾರೆ.
ಎಲ್ಲರ ಕಾಳಜಿಗೆ ಅತ್ಯಂತ ಕೃತಜ್ಞ. ಅವರ ಸಂಕಲ್ಪ, ಜನರ ಶುಭ ಹಾರೈಕೆಗಳು ಅವರನ್ನು ಬಲವಾಗಿ ಮುಂದುವರಿಸುತ್ತವೆ ಎಂದು ಅವರು ಹೇಳಿದ್ದಾರೆ.
ಖರ್ಗೆ ಅಸ್ವಸ್ಥರಾದ ಮಾಹಿತಿ ತಿಳಿದ ಪ್ರಧಾನಿ ಮೋದಿ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದು, ಶೀಘ್ರ ಚೇತರಿಕೆಗೆ ಹಾರೈಸಿದ್ದಾರೆ.