ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧ T20 ವಿಶ್ವಕಪ್ ಫೈನಲ್ ಪಂದ್ಯವನ್ನು ಗೆದ್ದ ಭಾರತ ತಂಡಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾಗೆ ಅಭಿನಂದನೆ ಸಲ್ಲಿಸಿದ್ದಾರೆ. ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ತಂಡವು ಕಷ್ಟಕರ ಸಂದರ್ಭಗಳಲ್ಲಿ ಉತ್ಸಾಹದೊಂದಿಗೆ ಸಾಗಿತು ಮತ್ತು ಪಂದ್ಯಾವಳಿಯ ಉದ್ದಕ್ಕೂ ಅತ್ಯುತ್ತಮ ಕೌಶಲ್ಯಗಳನ್ನು ಪ್ರದರ್ಶಿಸಿತು. ಇದು ಅಂತಿಮ ಪಂದ್ಯದಲ್ಲಿ ಅಸಾಮಾನ್ಯ ಗೆಲುವು. ನಾವು ನಿಮ್ಮ ಬಗ್ಗೆ ಹೆಮ್ಮೆಪಡುತ್ತೇವೆ! ಎಂದು ರಾಷ್ಟ್ರಪತಿ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಟಿ20 ವಿಶ್ವಕಪ್ ಗೆದ್ದ ಭಾರತ ತಂಡವನ್ನು ಅಭಿನಂದಿಸಿದ್ದಾರೆ. “ನಮ್ಮ ತಂಡವು T20 ವಿಶ್ವಕಪ್ ಅನ್ನು ತನ್ನದೇ ಶೈಲಿಯಲ್ಲಿ ಮನೆಗೆ ತಂದಿದೆ! ನಾವು ಭಾರತೀಯ ಕ್ರಿಕೆಟ್ ತಂಡದ ಬಗ್ಗೆ ಹೆಮ್ಮೆಪಡುತ್ತೇವೆ. ಈ ಪಂದ್ಯವು ಐತಿಹಾಸಿಕವಾಗಿತ್ತು,” ಎಂದು ತಿಳಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಟೀಂ ಇಂಡಿಯಾ ಗೆಲುವಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ಧರಾಮಯ್ಯ, ಪ್ರಿಯಾಂಕಾ ಗಾಂಧಿ ಸೇರಿ ದೇಶದ ಗಣ್ಯರು ಟೀಂ ಇಂಡಿಯಾ ಗೆಲುವಿಗೆ ಶುಭ ಹಾರೈಸಿದ್ದಾರೆ.
2007 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಗೆದ್ದ ನಂತರ ಭಾರತಕ್ಕೆ ಇದು ಎರಡನೇ ಟಿ 20 ವಿಶ್ವಕಪ್ ಗೆಲುವು.