ನವದೆಹಲಿ : ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನ ಫೈನಲ್ ನಲ್ಲಿ ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಚಿನ್ನದ ಪದಕ ಪಡೆದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ನೀರಜ್ ಚೋಪ್ರಾ ಅವರನ್ನು ಅಭಿನಂದಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ನೀರಜ್ ಚೋಪ್ರಾ ಪ್ರತಿಭೆಗೆ ಇದು ಉತ್ಕೃಷ್ಟತೆಗೆ ಉದಾಹರಣೆಯಾಗಿದೆ. ಅವರ ಸಮರ್ಪಣೆ, ನಿಖರತೆ ಮತ್ತು ಉತ್ಸಾಹವು ಅವರನ್ನು ಅಥ್ಲೆಟಿಕ್ಸ್ನಲ್ಲಿ ಚಾಂಪಿಯನ್ ಮಾತ್ರವಲ್ಲದೆ ಇಡೀ ಕ್ರೀಡಾ ಜಗತ್ತಿನಲ್ಲಿ ಸಾಟಿಯಿಲ್ಲದ ಶ್ರೇಷ್ಠತೆಯ ಸಂಕೇತವನ್ನಾಗಿ ಮಾಡುತ್ತದೆ. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನ ಗೆದ್ದಿದ್ದಕ್ಕಾಗಿ ಅವರಿಗೆ ಅಭಿನಂದನೆಗಳು.
ಹಂಗೇರಿಯ ಬುಡಾಪೆಸ್ಟ್ನಲ್ಲಿ ನಡೆದ ಫೈನಲ್ನಲ್ಲಿ ಅವರು 88.17 ಮೀಟರ್ ಎಸೆಯುವ ಮೂಲಕ ಜಾವೆಲಿನ್ ಗೆದ್ದರು. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ನೀರಜ್ ಪಾತ್ರರಾಗಿದ್ದಾರೆ.
ಅರ್ಹತಾ ಸುತ್ತಿನಲ್ಲಿ ನೀರಜ್ ಮೊದಲ ಪ್ರಯತ್ನದಲ್ಲಿ 88.77 ಮೀಟರ್ ದೂರ ಎಸೆದು ಫೈನಲ್ ಪ್ರವೇಶಿಸಿದರು. ಫೈನಲ್ ನಲ್ಲಿ ಮೊದಲ ಪ್ರಯತ್ನ ವಿಫಲವಾಯಿತು. ಎರಡನೇ ಪ್ರಯತ್ನದಲ್ಲಿ ಅವರು 88.17 ಮೀಟರ್ ಎತ್ತರಕ್ಕೆ ಈಟಿಯನ್ನು ಎಸೆದರು. ನೀರಜ್ 86.32, 84.64, 87.73 ಮತ್ತು 83.98 ಮೀಟರ್ ಜಾವೆಲಿನ್ ಎಸೆದರು. ಭಾರತದ ಅಥ್ಲೀಟ್ ಕಿಶೋರ್ ಜೆನಾ 84.77 ಮೀಟರ್ ಎಸೆದು ಐದನೇ ಸ್ಥಾನ ಪಡೆದರೆ, ಡಿಪಿ ಮನು 84.14 ಮೀಟರ್ ಎಸೆದು ಆರನೇ ಸ್ಥಾನ ಪಡೆದರು. ಪಾಕಿಸ್ತಾನದ ಅರ್ಷದ್ ನದೀಮ್ 87.82 ಮೀಟರ್ ಎಸೆದು ಬೆಳ್ಳಿ ಪದಕ ಗೆದ್ದರು. ಜೆಕ್ ಗಣರಾಜ್ಯದ ಜಾಕೋಬ್ ವಡ್ಲೆಚ್ 86.67 ಮೀಟರ್ ಎಸೆದು ಕಂಚಿನ ಪದಕ ಗೆದ್ದರು.