ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಗಿ ಇಂದು ಮತ್ತು ನಾಳೆ ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಅವರು ತಮ್ಮ ದೆಹಲಿ ಭೇಟಿಯ ಸಂದರ್ಭದಲ್ಲಿ ಸಚಿವ ಸಂಪುಟ ವಿಸ್ತರಣೆ ಕುರಿತಾಗಿ ವರಿಷ್ಠರೊಂದಿಗೆ ಚರ್ಚೆ ನಡೆಸುವ ಸಾಧ್ಯತೆ ಇದೆ.
ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕೇಂದ್ರ ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಗಿಯಾಗಲಿದ್ದಾರೆ. ಶನಿವಾರ ಮಧ್ಯಾಹ್ನ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಭೆ ನಡೆಯಲಿದ್ದು, ಭಾನುವಾರ ನೀತಿ ಆಯೋಗದ ಗೌರ್ನಿಂಗ್ ಕೌನ್ಸಿಲ್ ಸಭೆ ನಡೆಯಲಿದೆ.
ದೆಹಲಿ ಭೇಟಿ ಸಂದರ್ಭದಲ್ಲಿ ಸಿಎಂ ಅವರು, ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಲಿದ್ದಾರೆ. 5 ಸಚಿವ ಸ್ಥಾನಗಳು ಖಾಲಿ ಉಳಿದಿದ್ದು, ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಸಚಿವ ಸ್ಥಾನಗಳನ್ನು ಭರ್ತಿ ಮಾಡಲು ನಿರ್ಧರಿಸಿದ್ದು, ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕಿದೆ ಎಂಬುದರ ಬಗ್ಗೆ ಚರ್ಚೆ ನಡೆಸಿ ಪ್ರಾದೇಶಿಕತೆ ಮತ್ತು ಜಾತಿ ಪ್ರಾತಿನಿಧ್ಯ ಆಧರಿಸಿ ಪಟ್ಟಿ ಸಿದ್ಧಪಡಿಸಲಾಗಿದೆ. ಬಿಜೆಪಿ ವರಿಷ್ಠರು ಕೂಡ ಪಟ್ಟಿ ಸಿದ್ದಪಡಿಸಿದ್ದು, ಸಿಎಂ ಜೊತೆಗೆ ಈ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.