ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಸಮಯ ಕೂಡಿ ಬಂದಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮೇ 10ರೊಳಗೆ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ವಿದೇಶ ಪ್ರವಾಸಕ್ಕೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ ವಾಪಸಾದ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಹೈಕಮಾಂಡ್ ನಾಯಕರು ಸಮಾಲೋಚನೆ ನಡೆಸಿ ತೀರ್ಮಾನ ಕೈಗೊಳ್ಳಲಿದ್ದಾರೆ. ರಾಜ್ಯ ಪ್ರವಾಸ ಕೈಗೊಂಡಿದ್ದ ಅಮಿತ್ ಶಾ ಅವರು ಸಂಪುಟ ಪುನಾರಚನೆ, ವಿಸ್ತರಣೆ ಬಗ್ಗೆ ರಾಜ್ಯ ನಾಯಕರೊಂದಿಗೆ ಚರ್ಚೆ ನಡೆಸಿದ್ದಾರೆ.
ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಸಂಪುಟ ವಿಸ್ತರಣೆ ಕುರಿತಂತೆ ದೆಹಲಿಗೆ ಮರಳಿದ ನಂತರ ಚರ್ಚಿಸಿ ತಿಳಿಸುವುದಾಗಿ ಅಮಿತ್ ಶಾ ಅವರು ಹೇಳಿದ್ದಾರೆ ಎಂದರು.
ಕೆ.ಎಸ್. ಈಶ್ವರಪ್ಪ ರಾಜೀನಾಮೆಯಿಂದ ತೆರವಾಗಿರುವ ಸ್ಥಾನ ಸೇರಿದಂತೆ ಖಾಲಿ ಇರುವ 5 ಸ್ಥಾನಗಳ ಜೊತೆಗೆ ಕೆಲವರನ್ನು ಕೈಬಿಟ್ಟು ಹೊಸ ಮುಖಗಳಿಗೆ ಆದ್ಯತೆ ನೀಡುವ ಸಾಧ್ಯತೆ ಇದೆ. ಚುನಾವಣೆ ಉದ್ದೇಶದಿಂದ ಸಂಪುಟ ರಚಿಸಲಿದ್ದು, ಎಲ್ಲ ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡುವ ಬಗ್ಗೆಯೂ ಹೈಕಮಾಂಡ್ ನಾಯಕರು ಚರ್ಚೆ ನಡೆಸಿದ್ದಾರೆ. ಪ್ರಧಾನಿ ಮೋದಿ ವಿದೇಶ ಪ್ರವಾಸ ಮುಗಿಸಿ ಬಂದ ನಂತರ ಅವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.