ಕಜಾನ್: ರಷ್ಯಾದಲ್ಲಿ ಬುಧವಾರ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ.
ಕಜಾನ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿದೇಶಾಂಗ ಸಚಿವಾಲಯವು ಪ್ರಮುಖ ಬೆಳವಣಿಗೆಯನ್ನು ದೃಢಪಡಿಸಿದೆ. ಬ್ರಿಕ್ಸ್ ಶೃಂಗಸಭೆಯ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವೆ ದ್ವಿಪಕ್ಷೀಯ ಸಭೆ ನಡೆಯಲಿದೆ ಎಂದು ನಾನು ಖಚಿತಪಡಿಸುತ್ತೇನೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಹೇಳಿದ್ದಾರೆ.
2020 ರಲ್ಲಿ ಗಾಲ್ವಾನ್ ಕಣಿವೆಯ ಘರ್ಷಣೆಯ ನಂತರ ಉಭಯ ನಾಯಕರ ನಡುವಿನ ಮೊದಲ ಸಭೆ ಇದಾಗಿದೆ. ಇಬ್ಬರೂ ನಾಯಕರು ನವೆಂಬರ್ 2022 ರಲ್ಲಿ ಇಂಡೋನೇಷ್ಯಾದ ಬಾಲಿಯಲ್ಲಿ G20 ಶೃಂಗಸಭೆ, ನಂತರ 2023ರ ಆಗಸ್ಟ್ ನಲ್ಲಿ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ BRICS ಶೃಂಗಸಭೆಯ ಸಂದರ್ಭದಲ್ಲಿ ಸಂಕ್ಷಿಪ್ತ ಸಂವಾದ ನಡೆಸಿದ್ದರು.
ಜೂನ್ 2020 ರಲ್ಲಿ ಗಾಲ್ವಾನ್ ಕಣಿವೆಯಲ್ಲಿ ನಡೆದ ಭೀಕರ ಘರ್ಷಣೆಯ ನಂತರ ಉಭಯ ದೇಶಗಳ ನಡುವಿನ ಸಂಬಂಧಗಳು ಹದಗೆಟ್ಟಿದೆ. ಗಡಿಯಲ್ಲಿ ಶಾಂತಿ ನೆಲೆಸದಿದ್ದರೆ ಚೀನಾ ಜತೆಗಿನ ಬಾಂಧವ್ಯ ಸಾಮಾನ್ಯವಾಗಿರಲು ಸಾಧ್ಯವಿಲ್ಲ ಎಂದು ಭಾರತ ಪ್ರತಿಪಾದಿಸುತ್ತಿದೆ.