ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿಯವರಿಗಾಗಿ 12 ಕೋಟಿ ರೂ.ಗಳ ಬೆಲೆಯ ಹೊಸ ಕಾರೊಂದನ್ನು ಖರೀದಿ ಮಾಡಲಾಗಿದ್ದು, ಇದರ ವಿರುದ್ಧ ಶಿವಸೇನಾ ಸಂಸದ ಸಂಜಯ್ ರಾವತ್ ವಾಗ್ದಾಳಿ ನಡೆಸಿದ್ದಾರೆ.
ಶಿವಸೇನಾ ಮುಖವಾಣಿ ’ಸಾಮ್ನಾ’ದಲ್ಲಿ ಸಾಪ್ತಾಹಿಕವಾಗಿ ತಾವು ಬರೆಯುವ ’ರೋಖ್‌ಠೋಕ್’ ಅಂಕಣದಲ್ಲಿ ಈ ಬಗ್ಗೆ ಹೇಳಿಕೊಂಡಿರುವ ರಾವತ್, ಈ ಹೊಸ ಕಾರಿನ ಖರೀದಿಯಿಂದಾಗಿ ಪ್ರಧಾನಿ ಮೋದಿ ಈಗ ತಮ್ಮನ್ನು ತಾವು ’ಫಕೀರ’ ಎಂದು ಕರೆದುಕೊಳ್ಳುವಂತಿಲ್ಲ ಎಂದಿದ್ದಾರೆ.
ದೇಶೀಯವಾಗಿ ನಿರ್ಮಿತವಾದ ಕಾರುಗಳನ್ನೇ ಬಳಸುತ್ತಿದ್ದರು ಎಂದು ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂರನ್ನು ಪ್ರಶಂಶಿಸಿದ್ದು, ಜೀವ ಬೆದರಿಕೆ ಇದ್ದರೂ ತಮ್ಮ ಅಂಗರಕ್ಷಕರನ್ನು ಬದಲಿಸದ ಮತ್ತೊಬ್ಬರು ಮಾಜಿ ಪ್ರಧಾನಿ ಇಂದಿರಾ ಗಾಂಧಿರನ್ನೂ ಮೆಚ್ಚಿ ಮಾತನಾಡಿದ್ದಾರೆ ರಾವತ್.
“ಡಿಸೆಂಬರ್ 28ರಂದು ಪ್ರಧಾನ ಮಂತ್ರಿ ಮೋದಿಯವರ 12 ಕೋಟಿ ರೂ. ಮೌಲ್ಯದ ಕಾರೊಂದರ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದವು. ತಮ್ಮನ್ನು ತಾವು ಪ್ರಧಾನ ಸೇವಕ, ಫಕೀರ ಎಂದು ಕರೆದುಕೊಳ್ಳುವ ವ್ಯಕ್ತಿ ವಿದೇಶೀ ನಿರ್ಮಿತ ಕಾರೊಂದನ್ನು ಬಳಸುತ್ತಿದ್ದಾರೆ. ಪ್ರಧಾನ ಮಂತ್ರಿಯ ಭದ್ರತೆ ಹಾಗೂ ಆರಾಮ ಮುಖ್ಯವಾಗಿವೆ, ಆದರೆ ಇಂದಿನಿಂದ ತಾವು ಫಕೀರ ಎಂದು ಅವರು ಮತ್ತೆ ಮತ್ತೆ ಹೇಳುವಂತಿಲ್ಲ,” ಎಂದು ರಾಜ್ಯ ಸಭಾ ಸಂಸದ ತಿಳಿಸಿದ್ದಾರೆ.
ಪ್ರಧಾನಿಯ ಭದ್ರತೆಯ ಹೊಣೆಗಾರಿಕೆ ಹೊತ್ತಿರುವ ವಿಶೇಷ ಭದ್ರತಾ ಪಡೆ (ಎಸ್‌ಪಿಜಿ) ಇತ್ತೀಚೆಗಷ್ಟೇ ಪ್ರಧಾನಿಗೆಂದು ಮರ್ಸಿಡಿಸ್ ಮೇಬಾಕ್ ಎಸ್650 ಗಾರ್ಡ್ ಕಾರನ್ನು ಖರೀದಿ ಮಾಡಿದೆ. ಮಾಧ್ಯಮಗಳಲ್ಲಿ ತಿಳಿಸಿರುವ ಪ್ರಕಾರ ಮೇಬಾಕ್ ಕಾರಿನ ಬೆಲೆ 12 ಕೋಟಿ ರೂ.ಗಳು. ಪ್ರಧಾನಿ ಹಿಂದೆ ಬಳಸುತ್ತಿದ್ದ ಕಾರಿನ ಮಾಡೆಲ್ ಅನ್ನು ಅದರ ಉತ್ಪಾದಕ ಬಿಎಂಡಬ್ಲ್ಯೂ ತಯಾರಿಸುವುದನ್ನು ನಿಲ್ಲಿಸಿರುವ ಕಾರಣ ಈ ಹೊಸ ಕಾರನ್ನು ಖರೀದಿ ಮಾಡಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.