ಹೊಸಪೇಟೆ: ರಾಜ್ಯದಲ್ಲಿಂದು ಬಿರುಗಾಳಿ ಪ್ರಚಾರ ನಡೆಸಿದ ಮೋದಿ ಬೆಳಗಾವಿ, ಶಿರಸಿ, ದಾವಣಗೆರೆ ಬಳಿಕ ಬಳ್ಳಾರಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಹೊಸಪೇಟೆಯಲ್ಲಿ ಮತ ಬೇಟೆ ನಡೆಸಿದ್ದಾರೆ.
ಬಳ್ಳಾರಿ, ಕೊಪ್ಪಳ ಸೋದರ ಸೋದರಿಯರಿಗೆ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ ಮೋದಿ, ಅಂಜನಾದ್ರಿ, ಹಂಪಿ ವಿರೂಪಾಕ್ಷೇಶ್ವರ, ವಿಜಯ ವಿಠಲರಿಗೆ ಪ್ರಣಾಮಗಳು. ನಾನು ಹೋದ ಕಡೆಯಲ್ಲೆಲ್ಲಾ ಅಭೂತಪೂರ್ವ ಸ್ವಾಗತ ಸಿಕ್ಕಿದೆ. ‘ಫಿರ್ ಏಕ್ ಬಾರ್ ಮೋದಿ ಸರ್ಕಾರ್’ ಎಂದು ದೇಶವೇ ಹೇಳುತ್ತಿದೆ. ವಿಜಯನಗರ ಸಾಮ್ರಾಜ್ಯ ಸಮೃದ್ಧಿಯಾಗಿತ್ತು. ಹೊಸಪೇಟೆ ಸಮೃದ್ಧಿಯ ನೆಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಿಂದ ಭ್ರಷ್ಟಾಚಾರ ನಡೆಯುತ್ತಿದೆ. ಕಾಂಗ್ರೆಸ್ ಅವಧಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿತ್ತು. ನಾನು ತಿಂತೀನಿ ನೀನು ತಿನ್ನು ಎನ್ನುವ ಮನಸ್ಥಿತಿ ಇತ್ತು. ಈಗ ದೇಶದಲ್ಲಿ ಮತ್ತೊಮ್ಮೆ ಮೋದಿ ಸರ್ಕಾರ ಎನ್ನುತ್ತಿದ್ದಾರೆ. ಭಾರತ ಶರವೇಗದಲ್ಲಿ ಅಭಿವೃದ್ಧಿಯತ್ತ ಮುನ್ನುಗ್ಗುತ್ತಿದೆ. ಕೆಲವು ದೇಶಗಳಿಗೆ, ಕೆಲವು ವ್ಯಕ್ತಿಗಳಿಗೆ ಇದು ಇಷ್ಟವಾಗುತ್ತಿಲ್ಲ. ಕೆಲವರಿಗೆ ಭಾರತದ ಅಭಿವೃದ್ಧಿ ಇಷ್ಟವಾಗುತ್ತಿಲ್ಲ. ಭಾರತ ಅಶಕ್ತವಾಗುವುದನ್ನೇ ಕೆಲವರು ಬಯಸುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
2014ಕ್ಕೆ ಮೊದಲು ದಲ್ಲಾಳಿಗಳ ಸಾಲೇ ಇರುತ್ತಿತ್ತು. ಹೋಟೆಲ್ ರೂಮ್ ಗಳು ದಲ್ಲಾಳಿಗಳಿಂದಲೇ ತುಂಬಿರುತ್ತಿದ್ದವು. ಆದರೆ, ಬಿಜೆಪಿ ಅದಕ್ಕೆ ಬ್ರೇಕ್ ಹಾಕಿದೆ. ಬಿಜೆಪಿ ಯಾರಿಗೂ ತಲೆಬಾಗಲ್ಲ ಎನ್ನುವುದು ಅವರಿಗೆ ಬೇಸರ ತರಿಸಿದೆ. ವಿಕಸಿತ ಭಾರತದ ಕನಸು ನನಸಾಗುತ್ತಿದೆ. ಕರ್ನಾಟಕ ಕೂಡ ವಿಕಾಸವಾಗುತ್ತಿದೆ. ಭಾರತ ಜಗತ್ತಿನ ಉತ್ತಮ ರಾಷ್ಟ್ರ. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಕೇಂದ್ರ ಸಾಕಷ್ಟು ಅನುದಾನ ನೀಡಿದೆ. ಕಾಂಗ್ರೆಸ್ ನೀತಿಗಳಿಂದಾಗಿ ಕರ್ನಾಟಕ ನಲುಗಿದೆ ಎಂದು ಹೇಳಿದ್ದಾರೆ.