ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ವಿಸ್ತರಣೆ ಶೀಘ್ರದಲ್ಲೇ ನಡೆಯಲಿದ್ದು, ರಾಜ್ಯಕ್ಕೆ ಎರಡು ಸ್ಥಾನ ಲಭಿಸುವ ನಿರೀಕ್ಷೆಯಿದೆ.
ರಾಜ್ಯದಿಂದ ಯಾರಿಗೆ ಸಚಿವ ಸ್ಥಾನ ಸಿಗಲಿದೆ ಎಂಬುದು ಕುತೂಹಲ ಮೂಡಿಸಿದೆ. ರಾಜ್ಯವನ್ನು ಪ್ರತಿನಿಧಿಸುವ ಡಿ.ವಿ. ಸದಾನಂದಗೌಡ, ಪ್ರಹ್ಲಾದ ಜೋಶಿ ಮತ್ತು ನಿರ್ಮಲಾ ಸೀತಾರಾಮನ್ ಅವರು ಕೇಂದ್ರದಲ್ಲಿ ಸಚಿವರಾಗಿದ್ದಾರೆ. ಸಚಿವರಾಗಿದ್ದ ಸುರೇಶ್ ಅಂಗಡಿ ಅವರ ಅಕಾಲಿಕ ನಿಧನದಿಂದ ತೆರವಾದ ಸ್ಥಾನಕ್ಕೆ ರಾಜ್ಯದ ಸಂಸದರೊಬ್ಬರನ್ನು ನೇಮಿಸುವ ಸಾಧ್ಯತೆ ಇದೆ. ಇದರೊಂದಿಗೆ ಮತ್ತೊಬ್ಬರಿಗೆ ಸಚಿವ ಸ್ಥಾನ ಸಿಗಬಹುದು ಎಂದು ಹೇಳಲಾಗುತ್ತಿದೆ.
ಬಿ.ವೈ. ರಾಘವೇಂದ್ರ, ಶಿವಕುಮಾರ ಉದಾಸಿ, ಉಮೇಶ್ ಜಾಧವ ಮೊದಲಾದವರ ಹೆಸರುಗಳು ಪರಿಗಣನೆಯಲ್ಲಿದೆ. ಎರಡು ವರ್ಷದ ನಂತರ ಮೋದಿ ಸಂಪುಟಕ್ಕೆ ಭರ್ಜರಿ ಸರ್ಜರಿ ನಡೆಯುತ್ತಿದ್ದು, 27 ಜನರಿಗೆ ಸಚಿವ ಸ್ಥಾನ ಸಿಗಬಹುದು. ಜ್ಯೋತಿರಾಧಿತ್ಯ ಸಿಂಧ್ಯ, ಸುಶೀಲ್ ಕುಮಾರ್ ಮೋದಿ, ಭೂಪೇಂದ್ರ ಯಾದವ್ ರ್ಬಾನಂದ ಸೋನಾವಾಲ್ ಸಂಪುಟಕ್ಕೆ ಸೇರಲಿದ್ದಾರೆ.
ಜೂನ್ 30 ರಂದು ಪ್ರಧಾನಿ ಮೋದಿಯವರ ಮಂತ್ರಿಮಂಡಲದ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಸಚಿವ ಸ್ಥಾನ ಕಳೆದುಕೊಳ್ಳುವವರಿಗೆ ಧನ್ಯವಾದಗಳನ್ನು ತಿಳಿಸಿ ಬೀಳ್ಕೊಡುಗೆ ನೀಡಲಾಗುವುದು ಎಂದು ಹೇಳಲಾಗಿದೆ.