ಕೋಲಾರ: 100 ಸುಳ್ಳುಗಳನ್ನು ಹೇಳಿ ಒಂದು ಸತ್ಯ ಮಾಡಲು ಬಿಜೆಪಿ ಹೊರಟಿದೆ. ಮೋದಿಯವರ ವರ್ಚಸ್ಸು ಈಗಾಗಲೇ ಮುಗಿದಿದ್ದು, ಇನ್ನು ನಾಲ್ಕು ತಿಂಗಳಲ್ಲಿ ಕೇಂದ್ರ ಸರ್ಕಾರ ಪತನವಾಗಲಿದೆ. ಮೋದಿ ಅಧಿಕಾರ ಕಳೆದುಕೊಳ್ಳಲಿದ್ದಾರೆ. ಮುಂದಿನ 15 ವರ್ಷ ರಾಹುಲ್ ಗಾಂಧಿಗೆ ಒಳ್ಳೆಯ ಕಾಲ ಬರಲಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.
ಕೋಲಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಲೋಕಸಭೆ ಚುನಾವಣೆಯಲ್ಲಿ ದೇಶದ ಜನ ಬಿಜೆಪಿಗೆ ಬುದ್ದಿ ಕಲಿಸಿದ್ದಾರೆ. ದೇಶದ ಜನ ಕಾಂಗ್ರೆಸ್ ಪರವಾಗಿದ್ದಾರೆ ಎಂಬುದನ್ನು ತೋರಿಸಿದ್ದಾರೆ. ಕಾಂಗ್ರೆಸ್ ಬಿಜೆಪಿಯ ರೀತಿ ಕೋಮುವಾದ, ಜಾತಿ, ಧರ್ಮಗಳ ಗಲಾಟೆಯ ಮೂಲಕ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಕೋಮು, ಜಾತಿ, ಧರ್ಮ ಆಧಾರಿತ ರಾಜಕಾರಣ ಬಹಳ ದಿನ ಉಳಿಯುವುದಿಲ್ಲ. ಜನರ ಆಶೀರ್ವಾದ ಕಾಂಗ್ರೆಸ್ ಪಕ್ಷಕ್ಕೆ ಇದ್ದು, ಕಾರ್ಯಕರ್ತರಿಗೆ ಒಳ್ಳೆಯ ಅವಕಾಶ ಸಿಗಲಿದೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಶಾಸಕರಾದ ಕೊತ್ತನೂರು ಮಂಜುನಾಥ್, ಕೆ.ವೈ. ನಂಜೇಗೌಡ, ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್, ಎಂಎಲ್ಸಿ ಅನಿಲ್ ಕುಮಾರ್ ಸೇರಿದಂತೆ ಹಲವು ಪ್ರಮುಖರು ಇದ್ದರು.