ಬೆಂಗಳೂರು: ಇಂದಿನಿಂದ ಬಿಜೆಪಿ ಸೇವಾ ಪಾಕ್ಷಿಕ ಹಮ್ಮಿಕೊಳ್ಳಲಾಗಿದೆ. ಸೆ. 17ರಿಂದ ರಾಜ್ಯದೆಲ್ಲೆಡೆ ಸೇವಾ ಪಾಕ್ಷಿಕ ಹಮ್ಮಿಕೊಂಡಿದ್ದು, 25,000ಕ್ಕೂ ಹೆಚ್ಚು ಕಾರ್ಯಕರ್ತರು ರಕ್ತದಾನ ಮಾಡಲಿದ್ದಾರೆ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಸೆ. 17ರಂದು ಮೋದಿ, ಸೆ. 25 ರಂದು ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜನ್ಮದಿನ ಹಾಗೂ ಅ. 2ರಂದು ಗಾಂಧಿ ಜಯಂತಿ ಇದ್ದು, ಈ ಹಿನ್ನೆಲೆಯಲ್ಲಿ ಸೆ. 17ರಿಂದ ಅ. 2ರವರೆಗೆ ಸೇವಾ ಪಾಕ್ಷಿಕ ಹಮ್ಮಿಕೊಳ್ಳಲಾಗಿದೆ. ಈ ಮೂವರ ಹೆಸರಿನಲ್ಲಿ ವಿವಿಧ ಸಾಮಾಜಿಕ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರಧಾನಿ ಮೋದಿ ಅವರ ಜನ್ಮದಿನದ ಅಂಗವಾಗಿ ರಾಜ್ಯದ ಎಲ್ಲಾ ಮಂಡಲ, ಜಿಲ್ಲಾ ಕೇಂದ್ರಗಳಲ್ಲಿ ರಕ್ತದಾನ ಶಿಬಿರ, ಗಿಡ ನೆಡುವುದು, ಅನ್ನ ಸಂತರ್ಪಣೆ, ಸ್ವಚ್ಛತಾ ಕಾರ್ಯಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯದರ್ಶಿ ಅಂಬಿಕಾ ಹುಲಿನಾಯ್ಕರ್ ಮಾತನಾಡಿ, ಸೆ. 18ರಿಂದ 24ರ ವರೆಗೆ ಶಾಲೆ, ಆಸ್ಪತ್ರೆಗಳ ಆವರಣದಲ್ಲಿ ಸ್ವಚ್ಛತಾ ಕಾರ್ಯ ನಡೆಯಲಿದೆ. ಕ್ರೀಡಾಪಟುಗಳಿಗೆ ಸನ್ಮಾನ, ಕ್ರೀಡಾ ಸಲಕರಣೆ ಸೌಲಭ್ಯ ವಿತರಿಸಲಾಗುವುದು. ವಿಚಾರಗೋಷ್ಠಿ, ಕಾಲೇಜು, ಚಿತ್ರಕಲಾ ಸ್ಪರ್ಧೆ, ರಂಗೋಲಿ, ಸ್ಪರ್ಧೆ, ಭಾಷಣ, ಪ್ರಬಂಧ, ಮರಳು ಶಿಲ್ಪಕಲಾ ಸ್ಪರ್ಧೆ, ಗ್ರಾಫಿಕ್, ವಿನ್ಯಾಸ ಸ್ಪರ್ಧೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.