ಅಹಮದಾಬಾದ್: ಗುಜರಾತ್ ನಲ್ಲಿ ತೌಕ್ತೆ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ ಮೋದಿ ತಕ್ಷಣದ ಪರಿಹಾರ ಕಾರ್ಯಗಳಿಗಾಗಿ 1000 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದಾರೆ.
ತೌಕ್ತೆ ಚಂಡಮಾರುತದಿಂದ ಹಾನಿಗೊಳಗಾದ ಎಲ್ಲ ರಾಜ್ಯಗಳಲ್ಲಿ ಸಾವನ್ನಪ್ಪಿದವರ ರಕ್ತ ಸಂಬಂಧಿಗಳಿಗೆ ಎರಡು ಲಕ್ಷ ರೂಪಾಯಿ ನೀಡಲಾಗುತ್ತದೆ. ಆಯಾ ರಾಜ್ಯ ಸರ್ಕಾರಗಳು ಹಾನಿಯ ಮೌಲ್ಯಮಾಪನ ಮಾಡಿ ಕೇಂದ್ರಕ್ಕೆ ಮಾಹಿತಿ ನೀಡಿದ ಬಳಿಕ ಹಾನಿಗೊಳಗಾದ ರಾಜ್ಯಗಳಿಗೆ ತಕ್ಷಣದ ಹಣಕಾಸಿನ ನೆರವು ನೀಡಲಾಗುವುದು ಎಂದು ತಿಳಿಸಲಾಗಿದೆ.
ಚಂಡಮಾರುತದಿಂದ ಉಂಟಾದ ಹಾನಿಯನ್ನು ನಿರ್ಣಯಿಸಲು ಗುಜರಾತ್ ಸಿಎಂ ವಿಜಯ್ ರೂಪಾನಿ ಮತ್ತು ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಮೋದಿ 1000 ಕೋಟಿ ರೂ. ನೆರವು ಘೋಷಿಸಿದ್ದಾರೆ.
ಹಾನಿ ಸ್ಥಳಕ್ಕೆ ಅಧಿಕಾರಿಗಳು, ಸಚಿವರು ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ ನಂತರ ಗುಜರಾತ್ ಹೆಚ್ಚುವರಿ ಸಹಾಯ ಪಡೆಯಲಿದೆ. ಚಂಡಮಾರುತದಿಂದ ಹಾನಿಗೊಳಗಾದ ಕೇರಳ, ಕರ್ನಾಟಕ, ಗೋವಾ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೂ ಪರಿಹಾರ ನೀಡಲಾಗುವುದು. ಮೃತಪಟ್ಟವರ ಸಂಬಂಧಿಕರಿಗೆ 2 ಲಕ್ಷ ರೂ., ಗಾಯಗೊಂಡವರಿಗೆ 50 ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು.
ಈ ನಡುವೆ ಮಹಾರಾಷ್ಟ್ರದಲ್ಲಿಯೂ ಚಂಡಮಾರುತದಿಂದ ಹಾನಿಯಾಗಿದ್ದರೂ ತಾರತಮ್ಯ ಮಾಡಲಾಗುತ್ತಿದೆ ಎಂದು ಎನ್.ಸಿ.ಪಿ., ಶಿವಸೇನೆ ನಾಯಕರು ಟೀಕಿಸಿದ್ದಾರೆ. ಪ್ರಧಾನಿ ತವರು ರಾಜ್ಯದ ಜೊತೆಗೆ ಮಹಾರಾಷ್ಟ್ರದಲ್ಲಿಯೂ ಸಮೀಕ್ಷೆ ಮಾಡಬೇಕಿತ್ತು ಎಂದು ಎನ್.ಸಿ.ಪಿ. ಹೇಳಿದೆ.
ಮಹಾರಾಷ್ಟ್ರದಲ್ಲಿ ಪ್ರಧಾನಿ ಸಮೀಕ್ಷೆ ಮಾಡಿಲ್ಲ. ಏಕೆಂದರೆ ಮಹಾರಾಷ್ಟ್ರ ಗುಜರಾತ್ ನಂತೆ ಇರದೇ ಪ್ರಬಲ ಮುಖ್ಯಮಂತ್ರಿಯ ಕೈಯಲ್ಲಿದೆ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಹೇಳಿದ್ದಾರೆ.